ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ ವಿಧಿವಶ…

262
firstsuddi

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ಕರ್ನಾಟಕ ಏಕೀಕರಣದ ಹೋರಾಟಗಾರ ಕೋ. ಚೆನ್ನಬಸಪ್ಪ ಅವರು (98) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 6.30ರ ಸುಮಾರಿಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಗಡಿಪಾರು, ನಮ್ಮೂರ ದೀಪ, ಹಿಂದಿರುಗಿ ಬರಲಿಲ್ಲ, ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಚಿಂತನಶ್ರೀ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳೂ ಇವರಿಗೆ ಸಂದಿದೆ.

ಕೋ. ಚೆನ್ನಬಸಪ್ಪ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಸಂತಾಪ ಸೂಚಿಸಿದ್ದು, ಕೋ. ಚೆನ್ನಬಸಪ್ಪನವರ ನಿಧನದ ಸುದ್ದಿ ಕೇಳಿ ಬಹಳ ನೋವಾಗಿದೆ. ಸ್ವಾತಂತ್ರ ಚಳುವಳಿ, ಏಕೀಕರಣದ ಹೋರಾಟ ಮುಂತಾದ ಮೇರು ಕೆಲಸಗಳಲ್ಲಿ ತೊಡಗಿಕೊಂಡಿದ್ದ ಇವರು, ನಾಡಿನ ಹಿರಿಯ ಚೇತನರಾಗಿ‌ ನಾಡು-ನುಡಿ ವಿಚಾರದಲ್ಲಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಕರ್ನಾಟಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕ‌ ಇಂದು ಬಡವಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.

ಕೋ. ಚೆನ್ನಬಸಪ್ಪ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು,ಕರ್ನಾಟಕ ಏಕೀಕರಣದ ಹೋರಾಟಗಾರ, ಕ‌ನ್ನಡ ಪ್ರಜ್ಞೆಯನ್ನು ಉಸಿರಾಗಿಸಿಕೊಂಡ ಹಿರಿಜೀವ, ಕುವೆಂಪು ಅವರ ಪರಮಾಪ್ತ ಶಿಷ್ಯ, ವೈಯಕ್ತಿಕವಾಗಿ ಸದಾ ನನಗೆ ಮಾರ್ಗದರ್ಶನ ನೀಡುತ್ತಿದ್ದ ಹಿತೈಷಿ ಕೋ.ಚೆನ್ನಬಸಪ್ಪನವರ‌ ಅಗಲಿಕೆಯ ಸುದ್ದಿ ಆಘಾತವನ್ನುಂಟು ಮಾಡಿದೆ. ಆ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಎಂದು ಟ್ವಿಟ್ ಮಾಡಿದ್ದಾರೆ.