ಕರಗಡ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು: ಎಸ್.ಎಲ್.ಧರ್ಮೇಗೌಡ…

375
firstsuddi

ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆಯ ಜನರ ನೀರಿನ ಬವಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕರಗಡ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಶತಾಯಗತಾಯ ಪೂರ್ಣಗೊಳಿಸಲಾಗುವುದು ಎಂದು ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಭರವಸೆ ನೀಡಿದರು.
ಕಡೂರು ತಾಲ್ಲೂಕಿನ ದೇವನೂರಿನಲ್ಲಿ ಬಧವಾರ ನಡೆದ ಡಿಸಿಸಿ ಬ್ಯಾಂಕ್‍ನ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ನೀರಿನ ಬವಣೆಯನ್ನು ನೀಗಿಸುವಂತೆ ಸ್ಥಳೀಯರು ಮಾಡಿದ ಮನವಿಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ತಕ್ಷಣ ತಮ್ಮ ಮನವಿಗೆ ಸ್ಪಂದಿಸಿ ಕರಗಡ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡವನ್ನು ಪರಿಶೀಲನೆಗಾಗಿ ಕಳುಹಿಸಿದ್ದರು ಎಂದು ತಿಳಿಸಿದರು.
ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ಕಾಮಗಾರಿಯ ರೂಪುರೇಷೆಯನ್ನು ತಯಾರಿಸಿ ಮುಖ್ಯಮಂತ್ರಿಗಳಿಗೆ ಈಗಾಗಲೇ ವರದಿಯನ್ನು ಸಲ್ಲಿಸಿದೆ, ಎರಡನೇ ಹಂತದ ಕಾಮಗಾರಿಗೆ 19 ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ತಾವು ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯದಲ್ಲೇ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಜಿಲ್ಲೆಯ ಬಯಲುಸೀಮೆಯ ಜನರು ಮತ್ತು ರೈತರ ನೀರಿನ ಬವಣೆಯನ್ನು ತಾವು ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ, ಮುಖ್ಯಮಂತ್ರಿಗಳೂ ಸಹ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಈ ಹಿನ್ನೆಲೆಯಲ್ಲಿ ಯಾವುದೇ ಅಡೆತಡೆ ಎದುರಾದರೂ ಬಿಡದೇ ಆದಷ್ಟು ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯಕುಮಾರ್ ಮಾತನಾಡಿ ಬಯಲುಸೀಮೆಯ ಜನರ ನೀರಿನ ಬವಣೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಆ ಭಾಗದ ಕೆರೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದರು.
ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಡಿ.ಸತ್ಯನ್ ರೈತರ ಅಭಿವೃದ್ದಿಗಾಗಿ ಜಿಲ್ಲೆಯಲ್ಲಿ 26 ಶಾಖೆಗಳನ್ನು ನೂತನವಾಗಿ ತೆರೆಯಲಾಗಿದ್ದು, ಬಯಲುಸೀಮೆಯಲ್ಲಿ ಹೆಚ್ಚು ಶಾಖೆಗಳನ್ನು ಆರಂಭಿಸಲಾಗಿದೆ ಎಂದರು.
ಹಾಲು ಉತ್ಪಾದಕರ ಸಂಘ ಮತ್ತು ಗ್ರಾಮಸ್ಥರಿಂದ ಎಸ್.ಎಲ್.ಧರ್ಮೇಗೌಡ ಅವರನ್ನು ಸನ್ಮಾನಿಸಲಾಯಿತು, ಡಿಸಿಸಿ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಡೋಂಗ್ರೆ, ತಾ.ಪಂ. ಸದಸ್ಯೆ ಗೌರಮ್ಮ ಬಸವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ, ಲಕ್ಷ್ಮಣ್ ಉಪಸ್ಥಿತರಿದ್ದರು.