ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ…

156
firstsuddi

ಚಿಕ್ಕಮಗಳೂರು-ಕನ್ನಡ ರಾಮನಿಗೆ ಅಭಿಷೇಕದೊಂದಿಗೆ ನಗರ ಹೊರವಲಯದ ಹಿರೇಮಗಳೂರಿನ ಇತಿಹಾಸ ಪ್ರಸಿದ್ದ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವದ ವಿಧಿವಿಧಾನಗಳು ಸೋಮವಾರ ಆರಂಭಗೊಂಡವು.
ರಥೋತ್ಸವದ ಅಂಗವಾಗಿ ನಸುಕಿನಲ್ಲಿ ವೇದ ವಿದ್ವಾಂಸರಿಂದ ನಡೆದ ಸುಪ್ರಭಾತ ಸೇವೆಯ ನಂತರ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ನೇತೃತ್ವದಲ್ಲಿ ಕನ್ನಡ ರಾಮನಿಗೆ ಪಂಚ ಅಮೃತಗಳಾದ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ ಮತ್ತು ವಿವಿಧ ಫಲಗಳಿಂದ ಅಭಿಷೇಕ ನೆರವೇರಿಸಲಾಯಿತು.
ನಂತರ ಬೆಳಿಗ್ಗೆ ಆರಂಭಗೊಂಡ ಅಲಂಕಾರ ಸೇವೆ ಮಧ್ಯಾಹ್ನನದವರೆಗೂ ಮುಂದುವರೆಯಿತು, ಇದೇ ವೇಳೆ ದಾಸ ಸಾಹಿತ್ಯ ಪ್ರಾಜೆಕ್ಟ್‍ನ ಮಹಿಳೆಯರಿಂದ ನಾಮ ಸಂಕೀರ್ತನೆ, ಸ್ತ್ರೋತ್ರ ಪಠಣ, ಸಾಮೂಹಿಕ ಭಜನೆ ಜರುಗಿತು.
ಬೆಂಗಳೂರಿನ ವೇದಬ್ರಹ್ಮ ಶ್ರೀನಿವಾಸಾಚಾರ್ಯ, ವೇದಾಂತಾಚಾರ್ಯ ಹಾಗೂ ವೈಷ್ಣವಸಿಂಹ ಅವರಿಂದ ಪಾಂಚರಾತ್ರ ಆಗಮ ಪದ್ದತಿಯಲ್ಲಿ ಅನುಜ್ಞೆ, ವಿಶ್ವಕ್ಸೇನಾರಾಧನೆ, ಪುಣ್ಯಾಹ ವಾಚನ, ಮೃತ್ತಿಕಾ ಸಂಗ್ರಹಣೆ, ಅಂಕುರಾರ್ಪಣ, ರಕ್ಷ ಬಂಧನ, ಪಠಪ್ರತಿಷ್ಠೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು.
ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.
ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು.