ರಾಷ್ಟ್ರಪ್ರೇಮ ಮತ್ತು ದೇಶಭಕ್ತಿ ಎಲ್ಲರ ಧರ್ಮವಾಗಬೇಕು: ಬಿ.ತಿಪ್ಪೇರುದ್ರಪ್ಪ

417
firstsuddi

ಚಿಕ್ಕಮಗಳೂರು: ರಾಷ್ಟ್ರಪ್ರೇಮ ಮತ್ತು ದೇಶಭಕ್ತಿ ಎಲ್ಲರ ಧರ್ಮವಾಗಬೇಕು ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ಸಲಹೆ ಮಾಡಿದರು.ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸೇವಾದಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ವರ್ಷಗಳಲ್ಲಿ ನಮ್ಮ ಯುವಜನತೆಯಲ್ಲಿ ರಾಷ್ಟ್ರಪೇಮ ಮತ್ತು ದೇಶಭಕ್ತಿ ಕಣ್ಮರೆಯಾಗುತ್ತಿದೆ, ದೇಶ ನಮಗೇನು ಮಾಡಿದೆ ಎನ್ನುವ ಪ್ರವೃತ್ತಿಯನ್ನು ಅವರು ಬೆಳೆಸಿಕೊಳ್ಳುತ್ತಿದ್ದಾರೆ ಇದರಿಂದಾಗಿ ರಾಷ್ಟ್ರದ ಅಭಿವೃದ್ದಿಗೆ ಹಿನ್ನಡೆಯಾಗುತ್ತಿದೆ ಎಂದು ವಿಷಾದಿಸಿದರು.ನಮ್ಮ ಯುವಜನತೆ ದೇಶ ನಮಗೇನು ಮಾಡಿದೆ ಎಂದು ಯೋಚಿಸುವ ಬದಲು ನಾವು ದೇಶಕ್ಕೇನು ಕೊಡುಗೆ ನೀಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು, ರಾಷ್ಟ್ರಪ್ರೇಮ ಮತ್ತು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಹಾಗಾದಾಗ ಮಾತ್ರ ರಾಷ್ಟ್ರದ ಅಭಿವೃದ್ದಿಯಾಗುತ್ತದೆ ಎಂದರು.ಭಾರತ ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಹಂಪಯ್ಯ ಮಾತನಾಡಿ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಮತ್ತು ದೇಶಭಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಶಾಲೆಗಳಲ್ಲೂ ಸೇವಾದಳದ ಘಟಕಗಳನ್ನು ಸ್ಥಾಪಿಸಬೇಕು ಎಂದು ಸಲಹೆ ಮಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಸೇವಾದಳ ದಿನಾಚರಣೆ ಅಂಗವಾಗಿ ಐದು ದಿನಗಳ ಕಾಲ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಸದಸ್ಯ ಶಾಂತಕುಮಾರ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್, ಶಿಕ್ಷಕರಾದ ಹೆಚ್.ಬಿ.ಸಾವಿತ್ರಿ, ಟಿ.ಆರ್.ನಾಗವೇಣಿ ಉಪಸ್ಥಿತರಿದ್ದರು.