ಚಿಕ್ಕಮಗಳೂರು : ತಾಲೂಕಿನ ನಲ್ಲೂರಿನಲ್ಲಿ ಇತಿಹಾಸ ಪ್ರಸಿದ್ದ ದಕ್ಷಿಣಮುಖಿ ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ರಂಭಾಪುರಿ ಮಠಾಧೀಶ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಸಹಸ್ರಾರು ಭಕ್ತರ ನಡುವೆ ಮಂಗಳವಾರ ವೈಭವದಿಂದ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿಯ ಕೆಂಡೋತ್ಸವ, ಗ್ರಾಮದ ಹೆಬ್ಬಾಗಿಲಿನಲ್ಲಿ ನಿರ್ಮಿಸಿರುವ ಶ್ರೀ ನಂದೀಶ್ವರ ವಿಗ್ರಹದ ಉದ್ವಾಟನೆ ನೆರವೇರಿತು.
ಗ್ರಾಮಕ್ಕೆ ಆಗಮಿಸಿದ ಶ್ರೀ ರಂಭಾಪುರಿ ಮಠಾಧೀಶ ಡಾ|| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಕಲ್ಲೇದೇವರಹಳ್ಳಿಯ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ಬಳಿ ಗ್ರಾಮಸ್ಥರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು.
ನಂತರ ಗ್ರಾಮೀಣ ವಾದ್ಯಗಳು, ಕಳಶಗಳನ್ನು ಹೊತ್ತ ಮಹಿಳೆಯರು ಹಾಗೂ ಕಲಾ ತಂಡಗಳ ನಡುವೆ ರಂಭಾಪುರಿ ಮಠಾಧೀಶರ ಅಡ್ಡಪಲ್ಲಕ್ಕಿ ಉತ್ಸವವನ್ನು ನಲ್ಲೂರು ಗ್ರಾಮಕ್ಕೆ ಕರೆ ತಂದು ಮುಖ್ಯ ಬೀದಿಗಳಲ್ಲಿ ನಡೆಸಲಾಯಿತು.
ಮನೆಗಳ ಮುಂದೆ ಸಾರಿಸಿ ರಂಗವಲ್ಲಿ ಹಾಕಿ ಅಡ್ಡಪಲ್ಲಕ್ಕಿಯನ್ನು ಸ್ವಾಗತಿಸಿದ ಗ್ರಾಮಸ್ಥರು ಆರತಿ ಎತ್ತಿ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು.
ಶಂಕರದೇವರಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಗ್ರಾಮದಲ್ಲಿ ಎರಡು ದಿನಗಳ ಕಾಲ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.










