ನರೇಂದ್ರ ಮೋದಿಯವರು ಒಮ್ಮೆ ಹಿಟ್ಲರ್ ನ ಇತಿಹಾಸವನ್ನು ನೆನಪಿಸಿಕೊಳ್ಳುವುದು ಒಳಿತು : ಸಿದ್ದರಾಮಯ್ಯ…

669
firstsuddi

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡಿದ್ದು, ತಮ್ಮ ಅಧಿಕಾರವನ್ನು ಚಲಾಯಿಸಿ ಐಟಿ, ಇಡಿ, ಸಿಬಿಐಗಳನ್ನು ದುರ್ಬಳಕೆ ಮಾಡಿಕೊಂಡು, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ನರೇಂದ್ರ ಮೋದಿಯವರು ಒಮ್ಮೆ  ಹಿಟ್ಲರ್ ನ ಇತಿಹಾಸವನ್ನು ನೆನಪಿಸಿಕೊಳ್ಳುವುದು ಒಳಿತು. ಕಳೆದ ಬಾರಿ ದೇಶದಲ್ಲಿ ಮೋದಿಯವರ ಪರವಾದ ಅಲೆಯಿತ್ತು. ಬಿಹಾರ ಹಾಗೂ ಉತ್ತರ ಪ್ರದೇಶದ 120 ಸ್ಥಾನಗಳಲ್ಲಿ 103 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು, ಆದರೆ ಈ ಬಾರಿ ಈ ಎರಡೂ ರಾಜ್ಯಗಳು ಸೇರಿ 30 ಸ್ಥಾನಗಳನ್ನು ಗೆಲ್ಲುವುದು ಕೂಡ ಕಷ್ಟ. ಇದು ಮೋದಿಯವರ ಸುಳ್ಳಿನ ಸಾಮ್ರಾಜ್ಯದ ಪತನವನ್ನು ಸೂಚಿಸುತ್ತಿದೆ. ಕೇಂದ್ರ ಮಂತ್ರಿ ಅನಂತ ಕುಮಾರ್ ಹೆಗ್ಡೆಯವರು ದಲಿತರನ್ನು ನಾಯಿಗಳಿಗೆ ಹೋಲಿಕೆ ಮಾಡಿದರು, ಅಂಬೇಡ್ಕರರನ್ನು ಅವಮಾನಿಸಿದರು, ಅದೂ ಸಾಲದೆಂಬಂತೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಿಸಲು ಎಂದರು. ಇಂತಹಾ ನಿಜವಾದ ದೇಶದ್ರೋಹಿಗಳನ್ನು ತಮ್ಮ ಪಕ್ಷದಲ್ಲೇ ಇಟ್ಟುಕೊಂಡು ಮೋದಿಯವರು ಕಾಂಗ್ರೆಸ್ನತ್ತ ಬೊಟ್ಟುಮಾಡುತ್ತಿರುವುದು ವಿಪರ್ಯಾಸ. ಮಾನ್ಯ ನರೇಂದ್ರ ಮೋದಿ ಅವರೇ, ನಿಮಗೆ ನಿಜವಾಗಿಯೂ ಸೈನ್ಯ ಮತ್ತು ಸೈನಿಕರ ಬಗ್ಗೆ ಗೌರವವಿದ್ದರೆ ನಿಮ್ಮ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿರುವ ದೇಶಕ್ಕಾಗಿ ದುಡಿದ ಹೆಮ್ಮೆಯ ಸೈನಿಕ ತೇಜ್ ಬಹದ್ದೂರ್ನನ್ನು ಬಹಿರಂಗವಾಗಿ ಬೆಂಬಲಿಸಿ, ಚುನಾವಣೆಯಿಂದ ಹಿಂದೆ ಸರಿಯಿರಿ. ಒಬ್ಬ ಸೈನಿಕ ಆಯ್ಕೆಯಾಗುವುದನ್ನು ನೀವು ಬೆಂಬಲಿಸುವುದಿಲ್ಲವೇ? ಎಂದು ಟ್ವೀಟ್ ಮಾಡಿದ್ದಾರೆ.