ಚಿಕ್ಕಮಗಳೂರು : ಶಾಸಕ ಸಿ.ಟಿ.ರವಿ ಕಳಪೆ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆಗೆ ಒತ್ತಾಯಿಸಿರುವುದು ಅತ್ಯಂತ ಹಾಸ್ಯಾಸ್ಪದ : ಎಚ್.ಎಚ್.ದೇವರಾಜ್…

653
firstsuddi

ಚಿಕ್ಕಮಗಳೂರು : ಕರಗಡ ಕುಡಿಯುವ ನೀರಿನ ಕಾಮಗಾರಿ ಬಗ್ಗೆ ಶಾಸಕ ಸಿ.ಟಿ.ರವಿ ಅವರು ನೀಡಿರುವ ಹೇಳಿಕೆ ಹಾಸ್ಯಾಸ್ಪದ ಮತ್ತು ಬೇಜಾವಾಬ್ದಾರಿ ಹೇಳಿಕೆಯಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಹೇಳಿದ್ದಾರೆ.
2007 ರಲ್ಲಿ ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅರಂಭಗೊಂಡಾಗಿನಿಂದ ಇದುವರೆಗೂ ಸಿ.ಟಿ.ರವಿ ಅವರೇ ಶಾಸಕರಾಗಿದ್ದಾರೆ. ಇದರಿಂದಾಗಿ ಕಾಮಗಾರಿ ಕಳಪೆಯಾಗಿದ್ದಲ್ಲಿ ಅದಕ್ಕೆ ಅವರೂ ಹೊಣೆಯಾಗಬೇಕಾಗುತ್ತದೆ. ವಸ್ತು ಸ್ಥಿತಿ ಹೀಗಿರುವಾಗ ಶಾಸಕರು ಕಳಪೆ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆಗೆ ಒತ್ತಾಯಿಸಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ 15 ವರ್ಷಗಳಿಂದ ಕ್ಷೇತ್ರದ ಶಾಸಕರಾಗಿರುವ ಸಿ.ಟಿ.ರವಿ ಅವರು ಇದುವರೆಗೂ ಸುಮ್ಮನ್ನಿದ್ದು ಈಗ ಕಳಪೆ ಕಾಮಗಾರಿಯಾಗಿದೆ ಎನ್ನುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ದೇವರಾಜ್ ಹಾಗಾದರೆ ಇದುವರೆಗೂ ಕಳಪೆ ಕಾಮಗಾರಿ ಶಾಸಕರ ಕಣ್ಣಿಗೆ ಕಂಡಿರಲಿಲ್ಲವೇ, ಒಂದೊಮ್ಮೆ ಕಂಡಿದ್ದರೆ ಇದುವರೆಗೂ ಏಕೆ ಸುಮ್ಮನ್ನಿದ್ದರು ಎಂದಿದ್ದಾರೆ.
ಕರಗಡ ಕಾಮಗಾರಿ ಕಳಪೆಯಾಗಿದ್ದಲ್ಲಿ ಅದಕ್ಕೆ ಇಂಜೀನಿಯರ್ ಮತ್ತು ಗುತ್ತಿಗೆದಾರರು ಮಾತ್ರವಲ್ಲದೆ ಶಾಸಕರೂ ಸಹ ಹೊಣೆಯಾಗುತ್ತಾರೆ ಎಂದಿರುವ ಅವರು ಯೋಜನೆಗೆ ಯಾರು ಹಣಬಿಡುಗಡೆ ಮಾಡಿದರು ಎನ್ನುವುದು ಈಗ ಅಪ್ರಸ್ತುತ ಒಟ್ಟಿನಲ್ಲಿ ಸತತ ಬರಗಾಲದಿಂದ ತತ್ತರಿಸುತ್ತಿರುವ ಬಯಲು ಸೀಮೆಯ ಜನರಿಗೆ ನೀರು ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಬಯಲು ಸೀಮೆಯ ಜನರ ನೀರಿನ ಭವಣೆಯನ್ನು ನೀಗಿಸುವ ವಿಷಯದಲ್ಲಿ ಯಾರೂ ಒಣ ಪ್ರತಿಷ್ಟೆ ಮತ್ತು ರಾಜಕಾರಣ ಮಾಡಬಾರದು ಅಗ್ಗದ ಪ್ರಚಾರಕ್ಕಾಗಿ ಕರಸೇವೆ ಮಾಡುವುದು ಹೂಳೆತ್ತುವುದು ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ಬಿಡಬೇಕು ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಶಾಸಕರು ಕೈಜೋಡಿಸಬೇಕು ಎಂದು ಸಲಹೆ ಮಾಡಿದ್ದಾರೆ.