ಚಿಕ್ಕಮಗಳೂರು : ಕಾಫಿ ಬೆಳೆಗಾರರ ಸಮಸ್ಯೆಯನ್ನು ಪೂರ್ಣವಾಗಿ ಅಧ್ಯಯನ ಮಾಡಲು ದೆಹಲಿಯ ಪಾರ್ಲಿಮೆಂಟ್ ಭವನದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ವಿಶೇಷ ಸಮಿತಿಯನ್ನು ರಚಿಸಲಾಗಿದೆ.
ಸಭೆಯಲ್ಲಿ ಹಾಜರಿದ್ದ ಕಾಫಿ ಮಂಡಳಿ ಅಧ್ಯಕ್ಷರು ಮತ್ತು ಕರ್ನಾಟಕ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದ ಸಚಿವರು ಅಂತಿಮವಾಗಿ ವಾಣಿಜ್ಯ ಇಲಾಖೆ ತೋಟಗಾರಿಕಾ ವಿಭಾಗದ ಜಂಟಿ ಕಾರ್ಯದರ್ಶಿ ದರ್ಪಣ್ ಜೈನ್ ಮತ್ತು ತೋಟಗಾರಿಕಾ ನಿರ್ದೇಶಕ ಪಿ.ಶರವಣನ್ ನೇತೃತ್ವದ ವಿಶೇಷ ಸಮಿತಿಯನ್ನು ರಚಿಸಿದರು.
ಎಲ್ಲಾ ಕಾಫಿ ಬೆಳೆಗಾರರ ಸಂಘಟನೆಗಳನ್ನು ಹಾಗೂ ಬೆಳೆಗಾರರನ್ನು ಖುದ್ದು ಭೇಟಿ ಮಾಡಿ ಸಮಸ್ಯೆಗಳ ಅಧ್ಯಯನ ನಡೆಸಿ ಸದನ ಮುಗಿದ 15 ದಿನಗಳ ಒಳಗೆ ವರದಿಯನ್ನು ನೀಡುವಂತೆ ಸಮಿತಿಗೆ ಸೂಚಿಸಿದರು.
ಇದೇ ವೇಳೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್ ಮತ್ತು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರಿಗೆ ವಿವರಿಸಿದರು.
ಸಂಸದರಾದ ಶಿವಕುಮಾರ್ ಉದಾಸಿ, ಮುನಿಸ್ವಾಮಿ, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಪ್ರಭಾಕರ್ ಕೋರೆ, ತೇಜಸ್ವಿ ಸೂರ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಳೆದ ತಿಂಗಳು ದೆಹಲಿಗೆ ತೆರಳಿದ್ದ ಕರ್ನಾಟಕ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳ ನಿಯೋಗ ಪ್ರಧಾನ ಮಂತ್ರಿ, ಕೇಂದ್ರ ವಾಣಿಜ್ಯ ಮತ್ತು ಅರ್ಥ ಸಚಿವರನ್ನು ಭೇಟಿ ಮಾಡಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸುವುದರ ಜೊತೆಗೆ ಕಾಫಿ ಉದ್ಯಮದ ನೆರವಿಗೆ ಧಾವಿಸುವಂತೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಈ ಸಭೆಯನ್ನು ಕೇಂದ್ರ ಸರ್ಕಾರ ಆಯೋಜಿಸಿತ್ತು.










