ಆಕಸ್ಮಿಕ ಬೆಂಕಿಯಿಂದ 300 ಕುರಿ ಭಸ್ಮ, ಮುಗಿಲು ಮುಟ್ಟಿದ ರೈತನ ಆಕ್ರಂದನ…

257
firstsuddi

ಚಿತ್ರದುರ್ಗ : ಬೆಟ್ಟದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ 300 ಕುರಿಗಳು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊರಕೇರೆದೇವಪುರದ ಬಳಿ ನಡೆದಿದೆ. ಅಮೃತಾಪುರ ಗ್ರಾಮದ ನಿವಾಸಿ ತಿಮ್ಮಪ್ಪ ಅವರು ತಮ್ಮ ಒಂದು ಸಾವಿರ ಕುರಿಗಳನ್ನು ಮೇಯಿಸಲೆಂದು ಹೊರಕೆರೆದೇವರಪುರದ ಅರಣ್ಯಪ್ರದೇಶದತ್ತ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ 300 ಕುರಿಗಳು ಸುಟ್ಟು ಭಸ್ಮವಾಗಿದ್ದು, 700 ಕುರಿಗಳು ಪ್ರಾಣಾಪಾಯದಿಂದ ಪಾರಾಗಿದೆ. ಈ ಘಟನೆಯಿಂದಾಗಿ ರೈತ ತಿಮ್ಮಪ್ಪ ಅವರಿಗೆ ಸುಮಾರು 11 ಲಕ್ಷಕ್ಕೂ ಅಧಿಕ ನಷ್ಟವಾಗಿದ್ದು, ಕುರಿಗಳನ್ನು ಕಳೆದುಕೊಂಡ ರೈತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪಶು ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುರಿ ಕಳೆದುಕೊಂಡು ನಷ್ಟ ಅನುಭವಿಸುತ್ತಿರುವ ರೈತ ತಿಮ್ಮಪ್ಪ ಅವರಿಗೆ ಉಣ್ಣೆ ಅಭಿವೃದ್ದಿ ನಿಗಮದಿಂದ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.