ಮೂಡಿಗೆರೆ : ಮಲೆನಾಡು. ಹೇಳೋಕೆ ನಾಲ್ಕಕ್ಷರದ ಪದವಾದ್ರು ವರ್ಣಿಸೋಕೆ ಪದಪುಂಜಗಳೇ ಸಾಲದ ವನದೇವಿಯ ನೈಜ ಸೊಬಗು. ತಣ್ಣನೆಯ ಗಾಳಿ. ಚುಮು-ಚುಮು ಚಳಿ. ಸದಾ ಹಸಿರೋದ್ದು ಮಲಗಿರೋ ತುಂಬು ಮುತ್ತೈದೆ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಆದ್ರೆ, ಸದ್ಯದ ಸ್ಥಿತಿಗತಿಗಳು, ಬೆಳವಣಿಗೆಗಳು ಮಲೆನಾಡಿಗರನ್ನ ಆತಂಕದ ಕೂಪಕ್ಕೆ ತಳ್ಳಿದೆ. ಸಾವಿರಾರು ಬೆಳೆಗಾರರು, ಲಕ್ಷಾಂತರ ಕಾರ್ಮಿಕರು ಅಕ್ಷರಶಃ ಅಲ್ಲ, ಸಂಪೂರ್ಣ ಬೀದಿಗೆ ಬಿದ್ದಿದ್ದಾರೆ. ಇಂದಿನದ್ದು, ಮೊನ್ನೆ-ಮೊನ್ನೆವರೆಗೂ ಇದ್ದ ಮಲೆನಾಡಲ್ಲ. ಪ್ರಕೃತಿ ತನ್ನನ್ನ ತಾನೇ ನಾಶ ಮಾಡಿಕೊಳ್ಳ ಹೊರಟತಂತಿದೆ. ಆದ್ರೆ, ನಾಶವಾಗ್ತಿರೋದು ಪ್ರಕೃತಿಯಲ್ಲ. ಕಾಡು-ಮಲೆನಾಡಿಗೂ ಇದ್ದ ಸಂಬಂಧ, ಸಿದ್ಧಾಂತ, ಮೌಲ್ಯಗಳು. ಅವ್ಯಾವು ಇಲ್ಲ ಅಂದ್ರೆ ಮಲೆನಾಡೇ ಇರೋದಿಲ್ಲ. ಪ್ರಕೃತಿ ಅಂದ್ರೆ ಮಲೆನಾಡು, ಮಲೆನಾಡಿಗರಂದ್ರೆ ಕಾಡಿನ ಮಕ್ಕಳು. ರಕ್ಷಕರು. ಸಂರಕ್ಷರು. ವನದೇವಿಯ ಸುಪುತ್ರರು. 
ಆದ್ರೆ, ಕಳೆದೊಂದು ತಿಂಗಳಿನಿಂದ ಮಲೆನಾಡು ಮಲೆನಾಡಾಗಿ ಉಳಿದಿಲ್ಲ. ಮಲೆನಾಡಂದ್ರೆ ಮಲೆನಾಡಿಗರಿಗೆ ಪ್ರೀತಿ ಇತ್ತು. ಬಾಂಧವ್ಯವಿತ್ತು. ಕಾಡು-ನಾಡಿನ ಮಧ್ಯೆ ಹೆತ್ತೊಡಲ ಸಂಬಂಧವಿತ್ತು. ಆದ್ರಿಂದು, ಯಾವೂದೂ ಇಲ್ಲ. ಇರೋದೆಲ್ಲಾ ಭಯವಷ್ಟೆ. ಬಹುಶಃ ಈ ತಲೆಮಾರಿನ ಜನ ಕಾಣದ ದೈತ್ಯ ಮಳೆಯೇ ಇದಕ್ಕೆಲ್ಲಾ ಕಾರಣ. 1962-63ರಲ್ಲಿ ಈ ರೀತಿಯ ಮಳೆ ಬಂದಿತ್ತು ಅಂತಾರೆ ಹಿರಿಯರು. ಆದ್ರೆ, ಅಂದು ಇಷ್ಟು ಜನರಿರಲಿಲ್ಲ. ಊರು ಬೆಳೆದಿರಲಿಲ್ಲ. ಅನಾಹುತವೂ ಬೆರಳೆಣಿಕೆಯಷ್ಟು. ಆದ್ರಿಂದು, ಊರು-ಜನ ಎಲ್ಲಾ ಬೆಳೆದಿದೆ. ಆಗಿರೋ ಅನಾಹುತಗಳ ರಿಪೇರಿ ಅಸಾಧ್ಯ. ಒಂದೊಂದು ಹಳ್ಳಿಗೋಗಿ ನೋಡುದ್ರೆ ಕಲ್ಲು ಹೃದಯಲ್ಲೂ ಕಣ್ಣೀರು ಬರುತ್ತೆ. ಎಷ್ಟು ಕೋಪವಂದ್ರೆ, ವರುಣದೇವನತ್ತ ಹಿಡಿ ಮಣ್ಣು ತೂರಿ ಶಾಪ ಹಾಕುವಷ್ಟು.
ಮಲೆನಾಡಿನ ಸದ್ಯದ ಸ್ಥಿತಿಯನ್ನ ಹೇಳೋಕೆ-ಬರೆಯೋಕೆ ಅಸಾಧ್ಯ. ಅದ್ಯಾವ ಸವತಿ ಕಣ್ಣು ಬಿತ್ತೋ-ಏನೋ. ಮಲೆನಾಡ ಮಣ್ಣಿಗೂ-ಮಲೆನಾಡಿಗರಿಗೂ ಇದ್ದ ಆತ್ಮೀಯತೆಯ ಕೊಂಡಿ ಕಳಚಿ ಬಿದ್ದಂತಿದೆ. ಒಂದೆಡೆ ಕಾಫಿ-ಮೆಣಸಿನ ಸ್ಮಶಾನ. ಮತ್ತೊಂದೆಡೆ ಚಿತೆ ಮೇಲಿನ ಹೆಣದಂತೆ ಸುಟ್ಟು ಬೂದಿಯಾದ ಬದುಕು. ಮಗದೊಡೆ ಪ್ರಕೃತಿಯ ಮಾರಣ ಹೋಮ. ಒಂದೋ-ಎರಡೋ. ಕಣ್ಣಾಯಿಸದಲ್ಲೆಲ್ಲಾ ಅಳಿದುಳಿದ ಬೆಳೆ. ಮಳೆ ನೀರಲ್ಲಿ ಕೊಚ್ಚಿ ಹೋದ ಭವಿಷ್ಯ. ಮಣ್ಣಲ್ಲಿ ಮಣ್ಣಾದ ಕನಸು. ಮುಗಿಲೆತ್ತರದ ಬೆಟ್ಟಗುಡ್ಡಗಳು ಧರೆಗುರುಳಿದ್ವು. ಧರೆ ಪಾತಾಳಿಕ್ಕೀಳಿತು. ಭೂಮಿ ಬಾಯ್ಬಿಡ್ತು. ಬೆಟ್ಟ-ಗುಡ್ಡಗಳು ಕವಲು ದಾರಿಯಾದ್ವು. ಮನೆ ಮಣ್ಣು ಪಾಲಾಯ್ತು. ಹೊಲ-ಗದ್ದೆ-ತೋಟಗಳು ನೀರು ಪಾಲಾದ್ವು. ಬದುಕುವ ಆಸೆ ಯಮನ ಪಾಲಾಯ್ತು. ರಟ್ಟೆಯ ಶಕ್ತಿ ತೋಳಲ್ಲೇ ತಣ್ಣಗಾಯ್ತು. ಮನದ ಆಸೆ ಜಲರಾಕ್ಷಸನ ಒಡಲು ಸೇರ್ತು. ಜವಾನ-ದಿವಾನ ಎನ್ನದೆ ಎಲ್ಲರ ಬದುಕು ಬೀದಿಗೆ ಬಿತ್ತು.
ಆದ್ರೆ, ಒಂದಂತೂ ಸತ್ಯ. ಕಾಫಿ-ಮೆಣಸು ಬೆಳೆಗಾರರ ಸ್ಥಿತಿ ಕಂಡು ಕಣ್ಣೀರಾಕದವನೇ ಪಾಪಿ. ದುರುಳ. ದುರಾತ್ಮ. ಅದ್ರಲ್ಲೂ ಮಧ್ಯಮದ ವರ್ಗದ ಬೆಳೆಗಾರರು ನೋವು ಎದೆಮಟ್ಟದ ಮಗನನ್ನ ಕಳೆದುಕೊಂಡ ಸಾವಿನ ಮನೆಗಿಂತ ದೊಡ್ಡದು. ಮನೆ-ಮಠ, ಆಸ್ತಿ-ಪಾಸ್ತಿ ಎಲ್ಲವನ್ನು ಕಳೆದುಕೊಂಡು ಧನಿಕರೇ ನಿರ್ಗತಿಕರಾದಾಗ ಬೆಳೆಗಾರರಿಗೆ ಬದುಕುವ ಚೈತನ್ಯವೇ ಇಲ್ಲದಂತಾಗಿದೆ. ಯಾಕಂದ್ರೆ, ಮಲೆನಾಡಿಗರ ಜೀವವೇ ಕಾಫಿ, ಮೆಣಸು. ಮೆಣಸು, ಜಗತ್ತಿಗೆ ಖಾರವಾದ್ರು ಮಲೆನಾಡಿಗರಿಗೆ ಮಾತ್ರ ಸಿಹಿ. ಆದ್ರೆ, ಈ ವರ್ಷದ ಜಲರಾಕ್ಷಸನ ರಣಭೀಕರತೆಗೆ ಮಲೆನಾಡೇ ಅಲ್ಲೋಲ-ಕಲ್ಲೋಲವಾಗಿದೆ. ಕಾಫಿ-ಮೆಣಸಿನ ದರ ಕೇಳಿದ್ರೆ, ಭೂಕಂಪದ ಅನುಭವವಾದಂತೆ. ಕಾಫಿ ಬೆಳೆಗಾರರು ಸಾಹುಕಾರರೆಂಬ ಮಾತು ತದ್ವಿರುದ್ದವಾಗಿದೆ. ನಿಜಕ್ಕೂ ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ. ಸಾಲ ಮಾಡಿ ಸೋತಿದ್ದಾರೆ. ಹೆಂಡತಿ-ಮಕ್ಕಳ ಒಡವೆ ಅಡವಿಟ್ಟಿದ್ದಾರೆ. ಸಾಲ ರಿನಿವಲ್‍ಗಾಗಿ ಬ್ಯಾಂಕಿನವರು ನೋಟಿಸ್ ಕಳಿಸಿದ್ದಾರೆ. ಬೆಳೆಗಾರರ ಮನೆಯಲ್ಲೀಗ ಸ್ಮಶಾನ ಮೌನ. ಸರ್ಕಾರಗಳಾದ್ರು ಬೆಳೆಗಾರರ ಬೆನ್ನಿಗೆ ನಿಲ್ಲುತ್ತಂದ್ರೆ, ಅವು ಸತ್ತು ವರ್ಷಗಳೇ ಕಳೆದಿವೆ.

ಕಾಫಿ ಬೆಳೆಯಂದ್ರೆ, ಹೋಟೆಲ್‍ನಲ್ಲಿ ಕಾಫಿ ಕುಡಿದಷ್ಟು ಸಲೀಸಲ್ಲ. ವರ್ಷಕ್ಕೆ ನಾಲ್ಕೈದು ಬಾರಿ ಗೊಬ್ಬರ ಹಾಕಿ, ಗಿಡಗಳನ್ನ ತಣ್ಣಗಿಟ್ಟು, ಹೆತ್ತ ಮಕ್ಕಳಂತೆ ಸಾಕಬೇಕು. ಮೆಣಸಿನ ಬಳ್ಳಿಗಳನ್ನ ಮೂರು ತಿಂಗಳ ಮಗುವಿನಂತೆ ಸಲಹಬೇಕು. ಆದ್ರೆ, ಈ ಬಾರಿಯ ಮಳೆಗೆ ಕಾಫಿ ಕೊಚ್ಚಿ ಹೋಗಿದ್ದು ಮಲೆನಾಡಿಗರಿಗೆ ತಾವೇ ಹೆತ್ತು-ಹೊತ್ತು ಬೆಳೆಸಿದ ಮಕ್ಕಳ ಚಿತೆಗೆ ಬೆಂಕಿ ಇಟ್ಟಂತಾಗಿದೆ. 3-4 ವರ್ಷ ಮಳೆ ಇಲ್ಲದಿದ್ರು ಸಾಲ-ಸೋಲ ಮಾಡಿ, ನೀರಾಯಿಸಿ ಗಿಡಗಳನ್ನ ಉಳಿಸಿಕೊಳ್ತಾರೆ. ಆದ್ರೆ, ಈ ವರ್ಷದ ಹತ್ತೆ ಹತ್ತೇ ದಿನದ ಮಳೆ ಬೆಳೆಗಾರರ ಎದೆ ಮೇಲೆ ಚಪ್ಪಡಿ ಕಲ್ಲು ಎಳೆದಿದೆ. ಮಲೆನಾಡಲ್ಲೀಗ ನಿಂತಿರೋ ಗಿಡಗಳಿಗಿಂತ ಕೊಚ್ಚಿ ಹೋಗಿರೋ ಗಿಡಗಳ ಸಂಖ್ಯೆ ಹೆಚ್ಚು. ಮೆಣಸಿನ ಬಳ್ಳಿಗಳನ್ನಂತೂ ಕೇಳೋದೇ ಬೇಡ. 3-4-5 ಎಕರೆಯಲ್ಲಿ ಬದುಕು ಕಟ್ಟಿಕೊಳ್ತಿದ್ದ ಸಣ್ಣ ಬೆಳೆಗಾರರು ಬದುಕು ಜೀವಂತ ಶವ. ಮಳೆ ನಿಂತ ಮೇಲೆ ತೋಟಕ್ಕೆ ಹೋದ್ರೆ, ಅವರ ಕಣ್ಣಿಗೆ ಕಾಣೋದು ಎರಡೇ. ಒಂದು ಬ್ಯಾಂಕ್ ಸಾಲ. ಮತ್ತೊಂದು ಮುಂದಿನ ಬದುಕು. ಕಳೆದ ವರ್ಷ ಬೆಳೆ ಮಣ್ಣು ಪಾಲಾಗಿದ್ರೆ, ಈ ವರ್ಷ ಗಿಡಗಳೇ ಮಣ್ಣು ಪಾಲಾಗಿವೆ. ಗಿಡಗಳಿಗೆ ಜೀವವಿಲ್ಲ. ಬೆಳೆಗಾರರಿಗೆ ಜೀವನವೇ ಇಲ್ಲ. ಕಾಫಿ ಕಾಯಾಗುವ ಸಮಯವಿದು. ಅಂದ್ರೆ, ಬೆಳೆಗಾರರ ಬದುಕು ಗಟ್ಟಿಯಾಗುವ ಕಾಲ. ಆದ್ರೆ, ಕಾಲ ಚಕ್ರಕ್ಕೆ ಸಿಕ್ಕ ಬೆಳೆಗಾರರ ಬದುಕು ಬಿರುಗಾಳಿಗೆ ಸಿಕ್ಕ ಮರಿಗುಬ್ಬಿಯಂತಾಗಿದೆ.

ಮಲೆನಾಡಿಗರದ್ದು ಕೊಟ್ಟ ಕೈ. ಬೇಡಿದ್ದಲ್ಲ. ಯಾರದ್ದೇ ಮನೆಗೆ ಎಷ್ಟೇ ಹೊತ್ತಿಗೆ ಹೋದ್ರು ನಾಲ್ಕೈದು ಜನ ಊಟ ಮಾಡುವಷ್ಟು ಅಡುಗೆ ರೆಡಿ ಇರುತ್ತೆ. ಅಂತದ್ರಲ್ಲಿ, ಕೊಟ್ಟ ಕೈ ನಿರಾಶ್ರಿತ ಕೇಂದ್ರದಲ್ಲಿ ನಿರೀಕ್ಷಿಸೋ ಸ್ಥಿತಿ ಬಂದಿರೋದು ಹೆತ್ತ ಮಕ್ಕಳ ಕತ್ತು ಹಿಸುಕಿದಂತಾಗಿದೆ. ನಿರಾಶ್ರಿತ ಕೇಂದ್ರದಲ್ಲಿ ತಟ್ಟೆ ಹಿಡಿದು ಸಾಲಲ್ಲಿ ನಿಲ್ಲೋ ಬದಲು ಮಸಣ ಸೇರಿದ್ರೆ ಚೆನ್ನಾಗಿತ್ತು ಅಂತಿದ್ದಾರೆ ಬೆಳೆಗಾರರು. ಸದ್ಯಕ್ಕೆ ಮಲೆನಾಡಿಗರು 10 ವರ್ಷ ಹಿಂದೆ ಉಳಿದಂತಾಗಿದೆ. ಮೂಡಿಗೆರೆಯಲ್ಲಿ ಹೆಚ್ಚಾಗಿ ರೋಬೋಸ್ಟಾ ಬೆಳೆಯುತ್ತಾರೆ. 10 ವರ್ಷದ ಬೆಳೆ. ಈಗ ಗಿಡವಲ್ಲ. ಗಿಡವಿದ್ದ ಭೂಮಿಯೇ ಇಲ್ಲವಾಗಿರೋದ್ರಿಂದ ಹೊಸ ಬದುಕು ಕಟ್ಟಿಕೊಳ್ಳಬೇಕಾದ ಸ್ಥಿತಿ ಅವರದ್ದು. ಸತ್ತಿರೋ ಸರ್ಕಾರಗಳು ಮಲೆನಾಡಿಗರ ನೋವಿಗೆ ಹೇಗೆ ಸ್ಪಂದಿಸ್ತಾವೋ ಗೊತ್ತಿಲ್ಲ. ಆದ್ರೆ, ಒಂದು ಪಾಕೇಟ್ ಅಕ್ಕಿ, ಲೀಟರ್ ಎಣ್ಣೆ, ಬಿಸ್ಕೇಟ್, ಸೀರೆ-ಪಂಜೆ, ರಗ್ಗು-ಬೆಡ್‍ಶೀಟ್, ಬೆಳೆ ಪರಿಹಾರವಲ್ಲ ಅನ್ನೋದ್ನ ಸರ್ಕಾರ ಅರ್ಥೈಸಿಕೊಳ್ಳಬೇಕಿದೆ. ಇಂತಹಾ ಪರಿಹಾರವನ್ನ ಮಲೆನಾಡಿಗರು ಲೆಕ್ಕವಿಲ್ಲದಷ್ಟು ಕೊಟ್ಟಿದ್ದಾರೆ. ಈಗ ಅವರಿಗೆ ಬೇಕಾಗಿರೋದು ಭವಿಷ್ಯ ಹಾಗೂ ಭವಿಷ್ಯದ ಭದ್ರತೆ-ಚಿಂತನೆಯೇ ಹೊರತು ಪರಿಹಾರವಲ್ಲ. ಅದು ಇವತ್ತಿಗಷ್ಟೆ. ನಾಳೆ…?

ಹೇಳೋಕೆ-ಬರೆಯೋಕೆ ಸಮಯ-ಪದಗಳು ಎರಡೂ ಸಾಲಲ್ಲ. ಅಷ್ಟು ದೊಡ್ಡದು ಬೆಳೆಗಾರರ ಕಷ್ಟ-ಕಾರ್ಪಣ್ಯ. ದೂರದ ಬೆಟ್ಟ ಕಣ್ಣಿಗೆ ನುಣ್ಣು ಎಂಬಂತೆ, ಕಾಫಿ ಬೆಳೆಗಾರರಂದ್ರೆ ಸಾಹುಕಾರರೆಂದು ಎಲ್ಲರಿಗೂ ಅಸಡ್ಡೆ. ಸರ್ಕಾರಕ್ಕೂ ಕೂಡ. ಆದ್ರೆ, ಹೆಸರಿಗಷ್ಟೆ ಪ್ಲಾಂಟರ್ಸ್. ಅವರ ಜೀವನ ನಾಯಿ ಪಾಡು. ಬೀದಿ ನಾಯಿ ಪಾಡು. ದಪ್ಪ ಚರ್ಮದ ರಾಜಕಾರಣಿಗಳು ಹಾಗೂ ಅಧಿಕಾರಿಗಳೇ, ಪ್ಲಾಂಟರ್ಸ್‍ಗಳು ಸಾಹುಕಾರರೆಂದು, ಮನವಿಗಳನ್ನ ಕುರ್ಚಿ ಕೆಳಗೆ ಹಾಕಿ ಕುಳಿತಿದ್ದು ಸಾಕು. ನಿಮಗೆ ಮಾನವೀಯತೆ, ಮನುಷ್ಯತ್ವ ಅನ್ನೋದಿದ್ರೆ ನಿಮ್ಮ ಹಮ್ಮು-ಬಿಮ್ಮು, ಅಹಂಗಳನ್ನ ಬದಿಗೊತ್ತಿ. ಬನ್ನಿ ಬೆಳೆಗಾರರ ಭವಿಷ್ಯಕ್ಕೆ ಕೈ ಜೋಡಿಸಿ. ಇಂತಹಾ ಸಂದರ್ಭದಲ್ಲೂ ಬೆಳೆಗಾರರ ನೋವಿಗೆ ಸ್ಪಂದಿಸದಿದ್ರೆ ಸರ್ಕಾರಗಳು ಇನ್ಯಾವ ಸುಖಕ್ಕೆ. ಬಡವರ-ನಿರ್ಗತಿಕರ ಹೆಸರಲ್ಲಿ ರಾಮ-ಕೃಷ್ಣನ ಲೆಕ್ಕದಲ್ಲಿ ಕಿತ್ತೋ ತಿನ್ನೋಕಷ್ಟೆ. ಅಂತಹ ಸರ್ಕಾರಗಳು ಇದ್ದರೆಷ್ಟು-ಸತ್ತರೆಷ್ಟು ಎಂಬ ಭಾವನೆ ಬೆಳೆಗಾರರಲ್ಲಿ ಬರದೇ ಇರದು.