ಚಿಕ್ಕಮಗಳೂರು : ಬದುಕಿನ ವಿಕಾಸಕ್ಕೆ ಜಾನಪದ ಅತ್ಯಗತ್ಯ : ಡಾ|| ಜಿ.ಭೀಮೇಶ್ವರ ಜೋಷಿ

294
firstsuddi

ಚಿಕ್ಕಮಗಳೂರು : ಇಂದಿನ ಯುವಜನತೆ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ಹೊರಬಂದು ನಮ್ಮ ಪೂರ್ವಿಕರು ಬೆಳೆಸಿದ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ|| ಜಿ.ಭೀಮೇಶ್ವರ ಜೋಷಿ ಸಲಹೆ ಮಾಡಿದರು.
ಕಳಸಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕ ಮಂಗಳವಾರ ಏರ್ಪಡಿಸಿದ್ದ ಜಾನಪದ ಅರಿವು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ನಮ್ಮ ಸಂಸ್ಕೃತಿಯ ತಾಯಿಬೇರು, ಜಾನಪದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಆತನನ್ನು ಸುಸಂಸ್ಕೃತನನ್ನಾಗಿ ಮಾಡುತ್ತದೆ, ಪ್ರೀತಿ, ವಿಶ್ವಾಸ, ಸೌಹಾರ್ದತೆ, ಸಾಮರಸ್ಯವನ್ನು ಬೆಸೆಯುತ್ತದೆ, ವಿಶ್ವಮಾನವನನ್ನಾಗಿ ಮಾಡುತ್ತದೆ ಎಂದರು.
ಬದುಕಿನ ವಿಕಾಸಕ್ಕೆ ಜಾನಪದ ಅತ್ಯಗತ್ಯ ಎಂದ ಅವರು ಪಾಶ್ಚಾತ್ಯ ಸಂಸ್ಕೃತಿಯ ಅಬ್ಬರದಿಂದಾಗಿ ನಶಿಸುತ್ತಿರುವ ಅದನ್ನು ಮುಂದಿನ ಪೀಳಿಗೆಗೆ ಉಳಿಸದಿದ್ದಲ್ಲಿ ಜಗತ್ತಿನೆದುರು ನಾವು ಬರಿಗೈಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ಜಾನಪದ ಕಲೆ, ಸಾಹಿತ್ಯ ಮತ್ತುಸಂಸ್ಕೃತಿ ಸಮುದ್ರದಷ್ಟು ಆಳ ಮತ್ತು ವಿಸ್ತಾರವಾದುದು ಅದನ್ನು ನಾವು ಕಲಿಯುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಷತ್ ಜಿಲ್ಲಾದ್ಯಂತ ಜಾನಪದ ಅರಿವು ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.
ಅಂಟಿಕೆ ಪಿಂಟಿಕೆ ಕಲಾವಿದ ಚಂದ್ರೇಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಜಾನಪದದ ಮಹತ್ವ ಕುರಿತು ಸಾಹಿತಿ ಕ್ಯಾತಬೀಡು ರವೀಶ್ ಉಪನ್ಯಾಸ ನೀಡಿದರು.
ಪರಿಷತ್ತಿನ ಕಳಸ ತಾಲ್ಲೂಕು ಅಧ್ಯಕ್ಷ ಅರುಣ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು, ಕಲಾವಿದರಾದ ಹರಿಣಾಕ್ಷಿ, ಜಿ.ಬಿ.ಸುರೇಶ್ ಮತ್ತು ಶಿಕ್ಷಕ ಚಂದ್ರಶೆಟ್ಟಿ ಅವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು.
ಪರಿಷತ್ತಿನ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು, ಚಿತ್ರ ನಿರ್ಮಾಪಕ ರವಿ ರೈ, ಕಾಲೇಜಿನ ಪ್ರಾಂಶುಪಾಲ ವಿನಯ್ ಕುಮಾರ್, ಮೂಡಿಗೆರೆ ತಾಲ್ಲೂಕು ಗೌರವಾಧ್ಯಕ್ಷ ಮೋಹನ್ ರಾಜ್, ಸುರಭಿ ಜೈನ್, ಕಳಸಾ ಹೋಬಳಿ ಬಿಜೆಪಿ ಅಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು.