ಮೂಡಿಗೆರೆ : ಸರ್ಕಾರದಿಂದ ನೆರೆ ಪರಿಹಾರ ವಿಳಂಬ, ಆತ್ಮಹತ್ಯೆ ಮಾಡಿಕೊಂಡ ರೈತ…

826
firstsuddi

ಮೂಡಿಗೆರೆ : ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಎಸ್.ಕೆ. ಮೇಗಲ್ ಗ್ರಾಮದಲ್ಲಿ ನಡೆದಿದೆ. ಚಂದ್ರೇಗೌಡ(55) ಆತ್ಮಹತ್ಯೆ ಮಾಡಿಕೊಂಡ ರೈತ ಎನ್ನಲಾಗಿದ್ದು, ಭೂಕುಸಿತ ಹಾಗೂ ಪ್ರವಾಹದಿಂದ ಇದ್ದ ಒಂದು ಎಕರೆ ಗದ್ದೆ ಕೊಚ್ಚಿ ಹೋಗಿತ್ತು. ಇದರಿಂದ ರೈತ ಚಂದ್ರೇಗೌಡ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ ಮಳೆಯಿಂದ ಹಾನಿಯಾದ ಗದ್ದೆಯನ್ನು ಸರಿ ಮಾಡಲು ಕೈ ಸಾಲವನ್ನು ಮಾಡಿಕೊಂಡಿದ್ದರು. ಕಳೆದ ಒಂದು ತಿಂಗಳಿಂದ ಪರಿಹಾರಕ್ಕಾಗಿ ಅಲೆದಾಡಿ ಸರ್ಕಾರದಿಂದ ಪರಿಹಾರ ಇವತ್ತು ಸಿಗುತ್ತೆ, ನಾಳೆ ಸಿಗುತ್ತೆ ಎಂದು ಕಾದು ಕುಳಿತಿದ್ದರು. ಆದರೆ ಸರ್ಕಾರದಿಂದಲೂ ಯಾವುದೇ ಪರಿಹಾರ ಸಿಗದ ಕಾರಣ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಮನನೊಂದ ರೈತ ಚಂದ್ರೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.