ಬೆಂಗಳೂರು : ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರು ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಹಿನ್ನೆಲೆ, ವಿರೋಧ ಪಕ್ಷಗಳ ದನಿಯನ್ನು ದಮನಿಸುವ ಕೆಲಸ ನಡೀತಾ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. “ವಿರೋಧಪಕ್ಷಗಳ ದನಿಯನ್ನು ದಮನಿಸಿ ಆಡಳಿತ ಪಕ್ಷಕ್ಕೆ ನೆರವಾಗುವ ಉದ್ದೇಶದಿಂದಲೇ ಸ್ಪೀಕರ್ ಅವರು ಟಿವಿ ಚಾನೆಲ್ಗಳ ಕ್ಯಾಮೆರಾಗಳಿಗೆ ನಿರ್ಬಂಧ ಹೇರಿರುವುದು ಕಳೆದೆರಡು ದಿನಗಳ ಕಲಾಪದಿಂದ ಸ್ಪಷ್ಟವಾಗಿದೆ. ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡ ಆಡಳಿತ ಪಕ್ಷದ ಸದಸ್ಯರು, ಸರ್ಕಾರದ ವೈಫಲ್ಯದ ಬಗ್ಗೆ ಆಡಿದ ಮಾತುಗಳು ಮತ್ತು ಅವರ ಮುಖಗಳನ್ನು ಸರ್ಕಾರಿ ಕೃಪಾಪೋಷಿತ ಡಿಡಿ ಚಂದನ ನ್ಯೂಸ್ ಸೆನ್ಸಾರ್ ಮಾಡಿ ಬಿತ್ತರಿಸುತ್ತಿರುವುದು ಖಂಡನೀಯ. ಸ್ಪೀಕರ್ ಅವರು ಕ್ಲಾಸ್ ಟೀಚರ್ ಅಲ್ಲ, ನಾವು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೂ ಅಲ್ಲ. ಸ್ಪೀಕರ್ ಸದನದಲ್ಲಿ ಅಂಪೈರ್ ರೀತಿ ಇರಬೇಕು, ಅವರೇ ಆಟಗಾರರ ರೀತಿಯಲ್ಲಿ ಮೈದಾನಕ್ಕೆ ಇಳಿದರೆ ನಾವು ಆಟಗಾರರ ರೀತಿಯಲ್ಲಿಯೇ ಎದುರಿಸುತ್ತೇವೆ. ಸ್ಪೀಕರ್ ಕಾಗೇರಿಯವರ ಜೊತೆ ನನಗೆ ವೈಯಕ್ತಿಕ ಜಗಳವೇನಿಲ್ಲ. ವಿಧಾನಮಂಡಲದ ಶಿಷ್ಟಾಚಾರ-ನಡವಳಿಕೆಗಳ ಬಗ್ಗೆ ನನಗೂ ತಿಳಿದಿದೆ. ಆದರೆ ಅಧಿಕಾರ ವಹಿಸಿಕೊಂಡ ಕೂಡಲೇ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡಿದ ಸ್ಪೀಕರ್, ಮೊದಲ ದಿನದಿಂದಲೇ ಬಿಜೆಪಿ ಸದಸ್ಯರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಖಂಡನೀಯ ಎಂದು ಟ್ವೀಟ್ ಮಾಡಿದ್ದಾರೆ.










