ಚಿಕ್ಕಮಗಳೂರು : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಧನರಾಗುವ ರೋಗಿಗಳ ಶವವನ್ನು ಆಸ್ಪತ್ರೆವತಿಯಿಂದಲೇ ಉಚಿತವಾಗಿ ವಾಹನಗಳಲ್ಲಿ ಮನೆಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆಯ ಜಿಲ್ಲಾ ಘಟಕ ಆರೋಗ್ಯ ಸಚಿವರನ್ನು ಒತ್ತಾಯಿಸಿದೆ.
ವೇದಿಕೆಯ ರಾಜ್ಯ ನಿರ್ದೇಶಕ ಸೋಮಾನಾಯಕ್ ಅವರ ನೇತೃತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರನ್ನು ಬೆಂಗಳೂರಿನ ಕಛೇರಿಯಲ್ಲಿ ಸೋಮವಾರ ಭೇಟಿ ಮಾಡಿದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬಡವರು ಮಾತ್ರ ದಾಖಲಾಗುತ್ತಾರೆ, ಆರ್ಥಿಕವಾಗಿ ದುರ್ಬಲರಾಗಿರುವುದರಿಂದ ರೋಗಿಯ ಔಷಧಿ ಮತ್ತು ಮಾತ್ರೆಯ ವೆಚ್ಚ ಭರಿಸಲಾಗದೇ ಅವರು ಹೈರಾಣಾಗಿರುತ್ತಾರೆ, ಚಿಕಿತ್ಸೆ ಫಲಕಾರಿಯಾಗದೆ ರೋಗಿ ಮೃತಪಟ್ಟಲ್ಲಿ ಶವವನ್ನು ಮನೆಗೆ ಕೊಂಡೊಯ್ಯಲು ಖಾಸಗಿ ವಾಹನಗಳಿಗೆ ನೀಡಲು ಹಣವಿಲ್ಲದೆ ಪರದಾಡುತ್ತಿರುತ್ತಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತಪಟ್ಟವರ ಶವವನ್ನು ಆಸ್ಪತ್ರೆವತಿಯಿಂದಲೇ ಉಚಿತವಾಗಿ ವಾಹನದಲ್ಲಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು, ಸದಾಕಾಲ ರೋಗಿಗಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಹೋಟೆಲ್ ಮತ್ತು ಮೆಡಿಕಲ್ ಶಾಪ್‍ಗಳನ್ನು ತೆರೆಯಬೇಕು, ಹಿರಿಯ ನಾಗರೀಕರಿಗೆ ರಿಯಾಯತಿ ದರದಲ್ಲಿ ಔಷಧಿ ದೊರೆಯುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಕುಮಾರ್, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಸಮೀರ್, ಖಜಾಂಚಿ ಚಿದಾನಂದ್, ಕಡೂರು ತಾಲ್ಲೂಕು ಅಧ್ಯಕ್ಷ ಸಿದ್ದರಹಳ್ಳಿ ಮಂಜುನಾಥ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತಪಟ್ಟವರ ಶವವನ್ನು ಉಚಿತ ವಾಹನದಲ್ಲಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡುವಂತೆ...










