ಮೂಡಿಗೆರೆ : ಭಾರಿ ಗಾಳಿ-ಮಳೆಗೆ ಜನಜೀವನ ಸಂಪೂರ್ಣ ಅಸ್ಥವ್ಯಸ್ಥ…

719
firstsuddi

ಮೂಡಿಗೆರೆ : ಮೂರು ದಿನಗಳಿಂದ ಮಲೆನಾಡು ಹಾಗೂ ಬಯಲುಸೀಮೆಯ ಭಾಗದಲ್ಲಿ ಅಲ್ಲಲ್ಲೇ ಸುರಿಯುತ್ತಿದ್ದ ವರುಣದೇವ ಕಳೆದ ಎರಡು ದಿನದಿಂದ ಮಲೆನಾಡಿನಾದ್ಯಂತ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕಡೂರು, ತರೀಕೆರೆ, ಮೂಡಿಗೆರೆ, ಕೊಪ್ಪ ಹಾಗೂ ಎನ್.ಆರ್.ಪುರದಲ್ಲಿ ಧಾರಾಕಾರ ಮಳೆಯಾಗ್ತಿದ್ರೆ, ಮೂಡಿಗೆರೆಯಲ್ಲಿ ಎರಡು ದಿನಗಳಿಂದ ಜನ ಮನೆಯಿಂದ ಹೊರಬರಲಾಗದಂತ ಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ತಾಲೂಕಿನಾದ್ಯಂತ ಸುರಿಯುತ್ತಿರೋ ಭಾರೀ ಗಾಳಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಲ್ಲಲ್ಲೇ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೊಟ್ಟಿಗೆಹಾರದಲ್ಲಿ ಭಾರಿ ಗಾಳಿ ಮಳೆಗೆ ಶಾಲೆಯ ಹಾಗೂ ಗ್ರಾಮ ಪಂಚಾಯಿತಿಯ ಹಂಚುಗಳು ಹಾರಿ ಹೋಗಿದ್ದು, ಹೇಮಾವತಿ ನದಿಯ ನೀರಿನ ಹರಿವು ಹೆಚ್ಚಳವಾಗಿದ್ದು, ಬಂಕೇನ ಹಳ್ಳಿಯ ಸೇತುವೆ ಕಳೆದ ಮಳೆಗೆ ಕೊಚ್ಚಿ ಹೋಗಿ ಸ್ಥಳೀಯರೆ ಕಾಲು ಸುಂಕ ಮಾಡಿಕೊಂಡಿದ್ರು. ಆದ್ರೆ ಸುರಿಯುತ್ತಿರುವ ಭಾರಿ ಮಳೆಗೆ ಕಾಲು ಸುಂಕ ಕೊಚ್ಚಿ ಹೋಗಿದೆ. ಇನ್ನೂ ಜಾವಳಿಯಲ್ಲಿ ವಿದ್ಯುತ್ ಕಂಬ ಮುರಿದು ಮನೆ ಮೇಲೆ ಬಿದ್ದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದ ತಾಯಿ,ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಕೊಪ್ಪದ ಬಾಳೇಖಾನ್ ಎಸ್ಟೇಟ್ ಬಳಿ ಬೃಹತ್ ಗಾತ್ರದ ಮರವೊಂದು ಹಸುವಿನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಹಸು ಸಾವಿಗೀಡಾಗಿದೆ. ಕಳಸ, ಮಾಗುಂಡಿ ಹಾಗೂ ಕೊಟ್ಟಿಗೆಹಾರಕ್ಕೆ ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಂಬಂಧಿಕರ ಮನೆಗೆ ಹೋಗಿ ಬರುವ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಕಾರು ಬಿದ್ದ ಪರಿಣಾಮ ಬೆಂಗಳೂರು ಮೂಲದ ಮೂವರು ಸ್ಥಳದಲ್ಲೆ ಸಾವನಪ್ಪಿದ್ದು, ಗಂಭೀರ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.