ಬೆಂಗಳೂರು : ಸಿದ್ದರಾಮಯ್ಯ ಅವರು ಬಿಜೆಪಿಯವರು ಮತಾಂಧರು ಎಂದು ಹೇಳುತ್ತಾರೆ. ಮತಾಂಧನಾದ ಟಿಪ್ಪುವಿನ ಪರ ಇರುವ ಸಿದ್ದರಾಮಯ್ಯ ಅವರೇ ಮತಾಂಧರು ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿ ಅವರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 72 ವರ್ಷಗಳಿಂದ ಆಚರಿಸದ ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ರಾಜಕೀಯ ಉದ್ದೇಶಕ್ಕಾಗಿ ಜಾರಿಗೆ ತಂದಿದೆ. ಅಲ್ಲದೇ ನಾಡಧ್ವಜದ ಬಗ್ಗೆ ಇಷ್ಟು ವರ್ಷ ಇಲ್ಲದ ಕಾಳಜಿ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ವಿವಾದವನ್ನು ಸೃಷ್ಟಿ ಮಾಡಿದರು. ಹಾಗೂ ಲಿಂಗಾಯತ-ವೀರಶೈವ ವಿವಾದವನ್ನೂ ಕೂಡಾ ಚುನಾವಣೆಯ ಸಂದರ್ಭದಲ್ಲಿ ಆರಂಭಿಸಿದರು. ಸಿದ್ದರಾಮಯ್ಯ ಅವರೇ ಒಡೆದು ಆಳುವ ವಿಚಾರದಲ್ಲಿ ಕಿಂಗ್ ಆ್ಯಂಡ್ ಕಿಂಗ್ ಮೇಕರ್ ಎಂದರು.
ಸಿದ್ದರಾಮಯ್ಯ ಅವರು ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ ಬ್ರಿಟಿಷರ ವಿರುದ್ಧ ಡಚ್ಚರು ಹಾಗೂ ಪೋರ್ಚುಗೀಸರು ಹೋರಾಡಿದ್ದಾರೆ. ಹಾಗಾದರೆ ಅವರೂ ಸ್ವಾತಂತ್ರ್ಯ ಹೋರಾಟಗಾರರ? ಎಂದು ಪ್ರಶ್ನಿಸಿದರು. ಇದೇ ವೇಳೆ ಬಿಜೆಪಿ ಸರ್ಕಾರ ಸತ್ತು ಹೋಗಿದೆ ಎಂಬ ಸಿದ್ದರಾಮಯ್ಯ ಅವರ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರ ಸತ್ತ ಬಳಿಕವೇ ನಮ್ಮ ಸರ್ಕಾರ ಹುಟ್ಟಿಕೊಂಡಿದೆ. ಕಾಂಗ್ರೆಸ್ ಈಗಾ ಸತ್ತೋಗಿರುವ ಪಕ್ಷ. ಹೀಗಾಗಿ ಅವರು ಸಾವಿನ ಬಗ್ಗೆಯೇ ಮಾತನಾಡುತ್ತಾರೆ. ನೆರೆ ಪರಿಹಾರ ಹಣವಾಗಿ 50 ಸಾವಿರ 1 ಲಕ್ಷ ಹಣವನ್ನು ಕೊಟ್ಟಿದ್ದು ಯಾರು?. ಸತ್ತಿರುವವರು ಪರಿಹಾರ ಕೊಡುವುದಕ್ಕೆ ಆಗುತ್ತಾ? ಸಿದ್ದರಾಮಯ್ಯ ಅವರು ಹತಾಶರಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದರು.










