ಬಿಜೆಪಿಯವರು ಅನೈತಿಕವಾಗಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಿದ್ದಾರೆ : ಸಿದ್ದರಾಮಯ್ಯ.

211
firstsuddi

ಬೆಂಗಳೂರು : ಬಿಜೆಪಿಯವರು ಅನೈತಿಕವಾಗಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಿದ್ದಾರೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ನಾಳೆಗೆ 100 ದಿನ ಆಗುತ್ತದೆ. ಯಡಿಯೂರಪ್ಪ ಅವರು ಕಳೆದ 2 ದಿನದ ಹಿಂದೆ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಅವರ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ. 2019ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಬಂದಿಲ್ಲ. ನಮಗಿಂತ ಬಿಜೆಪಿಗೆ ಶೇಕಡಾವರು ಮತದಲ್ಲಿ ಜನಾದೇಶವೇನೂ ಇರಲಿಲ್ಲ. ಆದರೂ ಅನೈತಿಕವಾಗಿ ಹಿಂಬಾಗಿಲಿನಿಂದ ಸರ್ಕಾರವನ್ನು ರಚನೆ ಮಾಡಿದ್ದಾರೆ. 17 ಜನ ಶಾಸಕರಿಗೆ ರಾಜಿನಾಮೆ ಕೊಡಿಸಿದ್ದಾರೆ. ಅನರ್ಹ ಶಾಸಕರ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಇದು ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದ ಸಾಧನೆ. ನಮ್ಮ ಅವಧಿಯಲ್ಲಿ ನೀಡಿದ್ದ ಅನುದಾನವನ್ನು ವಾಪಸ್ ತೆಗೆದುಕೊಂಡಿದ್ದಾರೆ. ಇದು ಅವರ ಸರ್ಕಾರದ ಸಾಧನೆಯೇ..? ಅನುದಾನವನ್ನು ವಾಪಾಸ್ ಪಡೆಯೋದೇ ಸಾಧನೆನಾ..? ಎಂದು ಪ್ರಶ್ನಿಸಿದರು.
ಇದೇ ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ನೆರೆ ಸಂತ್ರಸ್ಥರಿಗೆ ಪರಿಹಾರ ಸಿಗದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ರಾಜ್ಯದಲ್ಲಿ ಪ್ರವಾಹ ಎದುರಾಯಿತು. ಸರ್ಕಾರ ರಚನೆಯಾಗಿ 20ದಿನ ಸಚಿವ ಸಂಪುಟ ರಚನೆ ಮಾಡಿರಲಿಲ್ಲ. ಪ್ರವಾಹ ಬಂದು 3ತಿಂಗಳಾಗುತ್ತಿದೆ. ಇದುವರೆಗೂ ನೆರೆ ಸಂತ್ರಸ್ಥರಿಗೆ ಪರಿಹಾರ ಸಿಕ್ಕಿಲ್ಲ. 2009ರಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಪ್ರವಾಹ ಬಂದಿತ್ತು. ಆಗ ಸಂತ್ರಸ್ಥರಿಗೆ ನಿರ್ಮಿಸಿದ ಮನೆಗಳು ಈಗಾ ಹಾಳು ಬಿದ್ದೋಗಿವೆ. ಮೂಲಭೂತ ಸೌಕರ್ಯಗಳನ್ನು ನೀಡದ ಕಾರಣ ಮನೆಯಲ್ಲಿ ಸಂತ್ರಸ್ಥರು ವಾಸಿಸಲು ಹಿಂದೇಟು ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳು ನನ್ನ ಹೇಳಿಕೆಯನ್ನು ಸುಳ್ಳು ಎಂದು ಹೇಳುತ್ತಿದ್ದಾರೆ. ಹಾಗಾದರೆ ನಾನು ನೆರೆ ಬಗ್ಗೆ ಮಾಹಿತಿಯನ್ನು ತಿಳಿಯದೇ ಹೇಳಿಕೆ ನೀಡುತ್ತೇನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.