ರಾಯಚೂರು : ರಾಜ್ಯದಲ್ಲಿ ಉಪಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಭವಿಷ್ಯ ನುಡಿದಿದ್ದಾರೆ. ನಗರದ ಯರಮರಸ್ ಸರ್ಕ್ಯೂಟ್ ಹೌಸ್ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅನರ್ಹತೆ ಪ್ರಕರಣವನ್ನು ಎದುರಿಸುತ್ತಿರುವ ಅನರ್ಹ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಶಿವಮೊಗ್ಗದ ತುಂಬಾ ಸಿಎಂ ಯಡಿಯುರಪ್ಪ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರು ಗಳಿಸಿದ ಅಕ್ರಮ ಆಸ್ತಿಯೇ ತುಂಬಿಕೊಂಡಿದೆ. ಆದರೆ ಅದರ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸುವುದಿಲ್ಲ. ಅಲ್ಲದೇ ಕಾಂಗ್ರೆಸ್ ಶಾಸಕರನ್ನು ತಮ್ಮೆಡೆಗೆ ಸೆಳೆಯಲು ಬಿಜೆಪಿ ಕೋಟ್ಯಾಂತರ ರೂ. ಆಮಿಷವನ್ನು ಹೊಡ್ಡಿದ್ದಾರೆ. ಈ ಬಗ್ಗೆ ಕೆಪಿಸಿಸಿ ದಾಖಲಿಸಿದ ದೂರನ್ನು ತನಿಖೆ ನಡೆಸಲು ಕೇಂದ್ರ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ. ಕಾಂಗ್ರೆಸ್ ನಾಯಕರ ವಿರುದ್ಧ ಮಾತ್ರ ನಿರಂತರವಾಗಿ ಐಟಿ, ಇಡಿ ಅಧಿಕಾರಿಗಳ ದಾಳಿ ನಡೆಯುತ್ತಿದೆ. ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಅಲ್ಪ ಮತಕ್ಕೆ ಕುಸಿದು ಸರ್ಕಾರ ಪತನವಾಗುತ್ತದೆ ಎಂದರು.










