ಬೆಂಗಳೂರು : ಟಿಕ್ ಟಾಕ್‍ನಲ್ಲಿ ಪರಿಚಯವಾದ ಮಹಿಳೆಯೊಬ್ಬರಿಗೆ ಉದ್ಯಮಿಯೊಬ್ಬರು ಲಕ್ಷ ಲಕ್ಷ ಹಣವನ್ನು ನೀಡಿ ಮೋಸ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಕುಮಾರ್ ಎಂಬ ಉದ್ಯಮಿಯೊಬ್ಬರು ತಮಗೆ ಟಿಕ್ ಟಾಕ್‍ನಲ್ಲಿ ಪರಿಚಯವಾದ ಮಹಿಳೆಗೆ 4ಲಕ್ಷವನ್ನು ನೀಡಿ ಮೋಸ ಹೋಗಿದ್ದು, ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಶಿವಕುಮಾರ್ ಅವರಿಗೆ ವಿಜಯಲಕ್ಷ್ಮಿ ಎಂಬ ಮಹಿಳೆ ಟಿಕ್ ಟಾಕ್ ಮೂಲಕ ಪರಿಚಯವಾಗಿದ್ದು, ಬಳಿಕ ಶಿವಕುಮಾರ್ ಅವರು ವಿಜಯಲಕ್ಮಿ ಅವರ ಮೊಬೈಲ್ ನಂಬರ್ ತೆಗೆದುಕೊಂಡು ದಿನ ಚಾಟಿಂಗ್ ಮಾಡುತ್ತಿದ್ದರು. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಹಲವು ದಿನಗಳ ಕಾಲ ಇಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ವಿಜಯಲಕ್ಷ್ಮಿ ಅವರು ಶಿವಕುಮಾರ್ ಅವರನ್ನು ಮದುವೆ ಆಗುವುದಾಗಿ ನಂಬಿಸಿ 4 ಲಕ್ಷ ರೂ ಹಣವನ್ನು ದೋಚಿದ್ದಾರೆ. ಶಿವಕುಮಾರ್ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ವಿಜಯಲಕ್ಷ್ಮಿ ಮದುವೆಗೆ ನಿರಾಕರಿಸಿ, ಅವರೊಂದಿಗೆ ಮಾತುಕತೆ ನಿಲ್ಲಿಸಿದ್ದಾರೆ. ಬಳಿಕ ಶಿವಕುಮಾರ್ ಅವರು ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಕೊಲೆ ಬೆದರಿಕೆ ಹಾಕಿದ್ದು, ಹೀಗಾಗಿ ಶಿವಕುಮಾರ್ ಅವರು ಮಹಿಳೆಯ ವಿರುದ್ಧ ಡಿಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ










