ಬೆಂಗಳೂರು : ಸುಧಾಕರ್ ಒಂಥರ ಊಸರವಳ್ಳಿ ಇದ್ದಂಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ಅವರ ವಿರುದ್ಧ ತಮ್ಮ ಟ್ವಿಟರ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. “2013ರಲ್ಲಿ ಆಂಜನಪ್ಪನವರಿಗೆ ಟಿಕೆಟ್ ನೀಡುವ ಬದಲು ಸುಧಾಕರ್ಗೆ ನೀಡಿದ್ದೆ, ಒಂದುವೇಳೆ ಆಗಲೇ ಆಂಜನಪ್ಪಂಗೆ ಟಿಕೆಟ್ ನೀಡಿದ್ದರೆ ಅವರು ಶಾಸಕರೂ ಆಗಿರುತ್ತಿದ್ದರು ಮತ್ತು ಕ್ಷೇತ್ರ ಇಂದು ಉಪಚುನಾವಣೆ ಎದುರಿಸುವಂತಹ ಸ್ಥಿತಿಯೂ ಬರುತ್ತಿರಲಿಲ್ಲ. ಎಂಥಾ ನಯವಂಚಕನಿಗೆ ಟಿಕೆಟ್ ನೀಡಿದೆನಲ್ಲಾ ಅಂತ ಈಗ ಪಶ್ಚಾತಾಪವಾಗುತ್ತಿದೆ.
ಸುಧಾಕರ್ ಒಂಥರ ಊಸರವಳ್ಳಿ ಇದ್ದಂಗೆ. ಜಾತ್ಯಾತೀತರ ಜೊತೆ ಇದ್ದಾಗ ಅವರಂತೆ, ಕೋಮುವಾದಿಗಳ ಜೊತೆಯಿದ್ದಾಗ ಅವರಂತೆ ಬಣ್ಣ ಬದಲಾಯಿಸುತ್ತಾರೆ. ಇವತ್ತೇನಾದರೂ ಬಿಜೆಪಿಯ ಆಪರೇಷನ್ ಕಮಲ ಯಶಸ್ವಿಯಾಗಿದ್ದರೆ ಅದರ ಕಿಂಗ್ಪಿನ್ ಈ ಸುಧಾಕರ್. ‘ಕೋತಿ ತಾನು ಕೆಡುವುದಲ್ಲದೆ ಇಡೀ ವನವನ್ನೇ ಕೆಡಿಸಿತ್ತಂತೆ’ ಹಾಗೆ ಇದು.
ಬೆಳಿಗ್ಗೆ 9 ಗಂಟೆಗೆ ರಾಜೀನಾಮೆ ವಾಪಾಸು ತಗೋತೀನಿ ಅಂತ ರಾತ್ರಿ ನನಗೆ ಮಾತು ಕೊಟ್ಟು, ಮುಂಜಾನೆ 6 ಗಂಟೆಗೆ ಕದ್ದು ಮುಂಬೈ ಓಡಿಹೋದ ಆಸಾಮಿ ಈ ಸುಧಾಕರ್. ಇಂಥವರನ್ನು ನಯಾಪೈಸೆಗೂ ನಂಬಬೇಡಿ. ಸದಾ ಇವರ ಒಳ್ಳೆಯದನ್ನೇ ಬಯಸಿದ ನಮ್ಮ ಬೆನ್ನಿಗೇ ಚೂರಿ ಹಾಕಿದವರು ಇನ್ನು ಕ್ಷೇತ್ರದ ಅಮಾಯಕ ಜನರನ್ನು ಬಿಟ್ಟಾರೆಯೇ?
2016-17ರ ಬಜೆಟ್ನಲ್ಲಿ ರಾಜ್ಯದ ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದ್ದು ನಮ್ಮ ಸರ್ಕಾರ. ಹಾಗಾಗಿ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುತ್ತಿದೆ. ಅಂದಿನ ಬಜೆಟ್ ಮಂಡಿಸಿದ್ದು ನಾನು, ಆರ್ಥಿಕ ಸಚಿವ ನಾನು, ಮುಖ್ಯಮಂತ್ರಿ ನಾನು. ಇದರಲ್ಲಿ ನಿಮ್ಮ ಸಾಧನೆ ಏನಿದೆ ಒಡಿ.ಸುಧಾಕರ್?
ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಿದ್ದು ನಮ್ಮ ಸರ್ಕಾರ. ನಾನು ಮುಖ್ಯಮಂತ್ರಿಯಾಗಿದ್ದಾಗ ವೀರಪ್ಪ ಮೊಯ್ಲಿ, ಶಿವಶಂಕರ್ ರೆಡ್ಡಿ ಇವರೆಲ್ಲರ ಸಹಕಾರದಿಂದ ಯೋಜನೆ ಜಾರಿ ಮಾಡಿದ್ದೆ. ಕುಡಿಯಲು ನೀರು ಕೊಟ್ಟವರಿಗೆ ಮೋಸಮಾಡಿ, ಯೋಜನೆಗೆ ವಿರೋಧ ಮಾಡಿದ್ದ ಬಿಜೆಪಿ ಜೊತೆ ಈಗ ಸುಧಾಕರ್ ಕೈಜೋಡಿಸಿದ್ದಾರೆ” ಎಂದು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.










