ಚಿಕ್ಕಮಗಳೂರು : ದೇಶದಲ್ಲಿ ಅತ್ಯಾಚಾರ ಮತ್ತು ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ ಇಂದಿನ ಸನ್ನಿವೇಶದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ : ಬಿ.ಕೆ.ಭಾಗ್ಯ

380
firstsuddi

ಚಿಕ್ಕಮಗಳೂರು : ದೇಶದಲ್ಲಿ ಅತ್ಯಾಚಾರ, ಅನಾಚಾರ ಮತ್ತು ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ ಇಂದಿನ ಸನ್ನಿವೇಶದಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿ ಬಿ.ಕೆ.ಭಾಗ್ಯ ಹೇಳಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಹಳೇ ಉಪ್ಪಳ್ಳಿಯ ಜ್ಞಾನರಶ್ಮಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮಕ್ಕಳು ಸತ್ಪ್ರಜೆಗಳಾಗಬೇಕು, ದೇಶಪ್ರೇಮಿಗಳಾಗಬೇಕು ಎಂಬ ಆಸೆ ಹೆತ್ತವರಲ್ಲಿದೆ, ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಅದಕ್ಕೆ ಪೂರಕವಾಗಿಲ್ಲ, ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವಲ್ಲಿ ಅದು ವಿಫಲವಾಗಿದೆ ಇದರಿಂದಾಗಿ ದೇಶದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ, ಅತ್ಯಾಚಾರ, ಅನಾಚಾರ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ ಸಮಾಜ ಶಾಂತಿ ನೆಮ್ಮದಿ ಕಳೆದುಕೊಂಡಿದೆ ಎಂದು ವಿಷಾದಿಸಿದರು.
ಮನುಷ್ಯತ್ವವನ್ನು ಕಳೆದುಕೊಂಡು ರಾಕ್ಷಸರಾಗುತ್ತಿರುವ ಲಂಗುಲಗಾಮಿಲ್ಲದಂತೆ ವರ್ತಿಸುತ್ತಿರುವ ಇಂದಿನ ಯುವ ಪೀಳಿಗೆಯನ್ನು ತಿದ್ದುವ ಶಕ್ತಿ ಹೆತ್ತವರು ಮತ್ತು ಶಿಕ್ಷಕರಿಗಿದೆ, ಅವರು ಮಕ್ಕಳಿಗೆ ಆಧ್ಯಾತ್ಮಿಕ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿದಲ್ಲಿ ದೇಶ ಶಾಂತಿ ಮತ್ತು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ ಕಳೆದ 9 ವರ್ಷಗಳಿಂದ ಸತತವಾಗಿ ಪ್ರತಿವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆಯುತ್ತಿರುವ ಜ್ಞಾನರಶ್ಮಿ ಶಾಲೆ ಉಳಿದ ಶಾಲೆಗಳಿಗೆ ಮಾದರಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ನಂದಕುಮಾರ್ ಕಳೆದ 16 ವರ್ಷಗಳ ಅವಧಿಯಲ್ಲಿ ಸಂಸ್ಥೆ ನಡೆದು ಬಂದ ಹಾದಿ ಮತ್ತು ಸಾಧನೆಯನ್ನು ವಿವರಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು, ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಮಾರಂಭದ ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಪ್ರಾಂಶುಪಾಲೆ ಹೆಚ್.ಪಾಲಾಕ್ಷಮ್ಮ ಅಧ್ಯಕ್ಷತೆ ವಹಿಸಿದ್ದರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಬಿ.ಎಸ್.ಜಯರಾಂ, ಬಸವರಾಜ್, ನಗರಸಭೆ ಮಾಜಿ ಸದಸ್ಯ ನೂರ್ ಅಹಮದ್ ಬದ್ರು, ವಿ.ಎಂ.ಬಸವರಾಜ್ ಉಪಸ್ಥಿತರಿದ್ದರು.