ಪೌರತ್ವ ಕಾಯಿದೆ ; ಚಿಕ್ಕಮಗಳೂರು ಜಿಲ್ಲೆಯಲ್ಲಿ ಡಿ.22ರವರೆಗೆ ನಿಷೇಧಾಜ್ಞೆ : ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್.

330
firstsuddi

ಚಿಕ್ಕಮಗಳೂರು : ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ನಾಗರಿಕ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಜಾರಿಗೆ ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಸಿಆರ್ ಪಿಸಿ ಸೆಕ್ಷನ್ 144ರಂತೆ ಡಿ.18ರ ಸಂಜೆ 6ಗಂಟೆಯಿಂದ ಡಿ.22ರ ಬೆಳಿಗ್ಗೆ 6ಗಂಟೆವರೆಗೆ ನಿಷೇಧಾಜ್ಞೆ ಹೊರಡಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ. ಡಿ.19ಮತ್ತು 20ರಂದು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಅಖಿಲ ಭಾರತ ಬಂದ್ಗೆ ಕರೆ ನೀಡಿರುವ ಬಗ್ಗೆ ಮಾಹಿತಿ ಇದ್ದು ಈ ಸಂದರ್ಭದಲ್ಲಿ ಮೆರವಣಿಗೆ, ಪ್ರತಿಭಟನೆ, ಕಾರ್ಯಕ್ರಮ ನಡೆಸಿದ್ದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಾರ್ವಜನಿಕ ಶಾಂತಿ, ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ನಿಷೇಧಾಜ್ಞೆ ಹೊರಡಿಸಲಾಗಿದೆ.
ನಿಷೇಧಾಜ್ಞೆ ಸಮಯದಲ್ಲಿ ಶಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕು, ಚಾಕು, ಕೋಲು/ಲಾಠಿ ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ. ಪಟಾಕಿ ಸಿಡಿಸುವುದು, ಯಾವುದೇ ಸ್ಫೋಟಕ ಒಯ್ಯುವುದನ್ನು ನಿಷೇಧಿಸಲಾಗಿದೆ. ಯಾವುದೇ ವಿಜಯೋತ್ಸವ ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ಸಾರ್ವಜನಿಕ/ರಾಜಕೀಯ ಸಭೆ ಸಮಾರಂಭ ಏರ್ಪಡಿಸುವಂತಿಲ್ಲ. ಕಲ್ಲು ಎಸೆಯುವುದು, ವೇಗದಿಂದ ಒಗೆಯುವ ಸಾಧನ/ಉಪಕರಣ ಶೇಖರಿಸುವುದು, ರವಾನೆ ಮಾಡುವುದನ್ನು ನಿಷೇಧಿಸಿದೆ. ವ್ಯಕ್ತಿಗಳ ಅಥವಾ ಅವರ ಆಕೃತಿ/ಪ್ರತಿಕೃತಿ ಪ್ರದರ್ಶನ ಮಾಡುವಂತಿಲ್ಲ. ಅಪರಾಧ ಮಾಡಲು ಪ್ರಚೋದಿಸುವ ಬಹಿರಂಗ ಘೋಷಣೆ ಕೂಗುವುದು, ಹಾಡುವುದು, ಆವೇಷ ಭಾಷಣ ಮಾಡುವಂತಿಲ್ಲ. ಚಿತ್ರ, ಸಂಕೇತ, ಭಿತ್ತಿಪತ್ರ ಅಥವಾ ಇತರ ಯಾವುದೇ ವಸ್ತು/ಪದಾರ್ಥ ತಯಾರಿಸುವುದು, ಪ್ರದರ್ಶಿಸುವುದು, ಪ್ರಸಾರ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.