ಮೂಡಿಗೆರೆ : ರಾಜ್ಯ ಮಟ್ಟದ ಛಾಯಾಗ್ರಾಹಕ ಸಾಧಕ ಪ್ರಶಸ್ತಿ ಪುರಸ್ಕೃತ ಹಿರಿಯ ಛಾಯಾಗ್ರಾಹಕ ವಸಂತ ಪೈ ಅವರನ್ನು ಮೂಡಿಗೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಶನಿವಾರ ಮೂಡಿಗೆರೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಛಾಯಾಗ್ರಾಹಕ ವಸಂತ ಪೈ, ಸನ್ಮಾನ ಪುರಸ್ಕಾರಗಳು ಮತ್ತಷ್ಟು ಉತ್ಸಾಹದಿಂದ ಕಾರ್ಯ ನಿರ್ವಹಿಸಲು ಪ್ರೇರಣೆಯಾಗಿವೆ. ಛಾಯಾಗ್ರಾಹಕ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗುತ್ತಿದ್ದು ಹೊಸ ಬದಲಾವಣೆಗಳಿಗೆ ಹೊಂದಿಕೊಂಡು ಸಾಗಬೇಕಿದೆ ಎಂದರು.
ಮೂಡಿಗೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಲೋಹಿತ್ ಶೆಟ್ಟಿ ಮಾತನಾಡಿ ಹಿರಿಯ ಛಾಯಾಗ್ರಾಹಕ ವಸಂತ ಪೈ ಅವರು ನೆಗೆಟಿವ್ ರೋಲ್‍ಗಳನ್ನು ಬಳಸಿ ಕಪ್ಪು ಬಿಳುಪು ಚಿತ್ರಗಳನ್ನು ತೆಗೆಯುತ್ತಿದ್ದ ಕಾಲದಿಂದ ಇಂದಿನ ಡಿಜಿಟಲ್ ಕ್ಯಾಮರಾಗಳ ಕಾಲದವರೆಗೂ ಛಾಯಾಗ್ರಾಹಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹಲವು ದಶಕಗಳ ಅವರ ಜೀವನಾನುಭವ ದೊಡ್ಡದು ಎಂದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜಯಚಂದ್ರ, ಮಾಜಿ ಅಧ್ಯಕ್ಷ ಪ್ರಕಾಶ್, ತಾಲ್ಲೂಕು ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ವಿಜಯ ಆಲ್ದೂರು, ಖಜಾಂಚಿ ದೀಪನ್‍ಗೌಡ, ಪದಾಧಿಕಾರಿಗಳಾದ ವಸಂತ್, ರಾಜೇಶ್, ದಿಲೀಪ್, ಮನೋಜ್,ಸುನೀಲ್, ಮುಂತಾದವರು ಇದ್ದರು.










