ಹಾಸನ : ಪೌರತ್ವ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್‍ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಘೋಷಣೆ ಮಾಡಿದ್ದ ಪರಿಹಾರವನ್ನು ತಡೆ ಹಿಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ಧಾರಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಹಿಂತೆಗೆದುಕೊಳ್ಳುವ ಸರ್ಕಾರ ಎಂದು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ಇದೆ. ಹೋರಾಟ ಮಾಡಿದವರನ್ನು ಹತ್ತಿಕ್ಕಲಾಗುತ್ತಿದೆ. ಈ ಸರ್ಕಾರಕ್ಕೆ ಎಂತಹ ಪರಿಸ್ಥಿತಿ ಇದೆ ಎಂಬುವುದು ಅರ್ಥವಾಗುತ್ತದೆ. ಬಿಜೆಪಿಗೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ್ದು, ಗೋಲಿಬಾರ್‍ನಲ್ಲಿ ಮೃತಪಟ್ಟವರಿಗೆ 10ಲಕ್ಷ ರೂ ಪರಿಹಾರ ಕೊಡದೆ ಇರುವಷ್ಟು ಖಜಾನೆ ಖಾಲಿ ಆಗಿರಬಹುದು. ಈ ಕುರಿತು ನಾವು ಅಧಿವೇಶನದಲ್ಲಿ ಪ್ರಶ್ನಿಸುತ್ತೇವೆ. ಹಾಸನದಿಂದಲೂ ಮಂಗಳೂರು ಗೋಲಿಬಾರ್‍ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಸಂಗ್ರಹಿಸಿ ಕೊಡುತ್ತೇವೆ. ಈವರೆಗೂ ಬಿಜೆಪಿಯವರು ಹೋರಾಟದ ಹೆಸರಿನಲ್ಲಿ ಮಾಡಿರುವ ಹಾನಿಗಳಿಗೆ ಅವರ ಆಸ್ತಿ ಜಪ್ತಿ ಮಾಡಲಿ ಎಂದು ಸವಾಲು ಹಾಕಿದ್ದು, ರಾಜಕೀಯ ದ್ವೇಷ ಬಿಡೋಣ ಎಂದು ಹೇಳುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂತಹ ಚಿಲ್ಲರೆ ರಾಜಕಾರಣವನ್ನು ಬಿಡಲಿ ಎಂದು ಕಿಡಿಕಾರಿದರು.










