ಉಡುಪಿ : ಉಸಿರಾಟದ ಸಮಸ್ಯೆಯಿಂದ ಮಣಿಪಾಲ್ನ ಕಸ್ತೂರಭಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಇಂದಿನಿಂದ ಗಣ್ಯರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲು ಗಣ್ಯರ ಭೇಟಿ ಹೆಚ್ಚಾಗುತ್ತಿರುವುದರಿಂದ ಶ್ರೀಗಳಿಗೆ ಚಿಕಿತ್ಸೆ ನೀಡಲು ಅಡ್ಡಿಯಾಗುತ್ತಿದ್ದು, ಹೀಗಾಗಿ ಇಂದಿನಿಂದ ಗಣ್ಯರ ಭೇಟಿಗೂ ಅವಕಾಶವಿಲ್ಲ ಎಂದು ಕೆಎಂಸಿ ಆಸ್ಪತ್ರೆಯ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮೊದಲು ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಅವರು, ಅವರದ್ದು ಮಗುವಿನಂತಹ ಮುಗ್ಧ ಮನಸ್ಸು. ಅವರು ಮಲಗಿರುವುದು ನೋಡಿದರೆ ಬೇಸರವಾಗುತ್ತದೆ. ಸ್ವಾಮೀಜಿ ಶೀಘ್ರ ಗುಣಮುಖರಾಗುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು. ಬಳಿಕ ಮಾತನಾಡಿದ ಶಾಸಕ ರವಿ ಸುಬ್ರಹ್ಮಣ್ಯ ಅವರು, ಸ್ವಾಮೀಜಿ ಅವರು ನಿತ್ಯ ಚಟುವಟಿಕೆಯಿಂದ ಇರುತ್ತಿದ್ದರು. ಅವರು ಎಂದಿಗೂ ಹಾಸಿಗೆ ಇಡಿದವರೇ ಅಲ್ಲ. ಸ್ವಾಮೀಜಿ ಮೊದಲಿನಂತೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ. ರಾಮಮಂದಿರ ನಿರ್ಮಾಣವಾಗುವ ವೇಳೆ ಅವರು ಇರಬೇಕು. ಅವರು ರಾಮಮಂದಿರ ನೋಡುವಂತಾಗಲಿ ಎಂದರು.










