ಚಿಕ್ಕಮಗಳೂರು : ಮಕ್ಕಳು ವಿದ್ಯಾವಂತರಾಗಬೇಕಾದರೆ ಶ್ರದ್ದೆ ಮತ್ತು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು : ಜಗದೀಶಾಚಾರ್

607
firstsuddi

ಚಿಕ್ಕಮಗಳೂರು : ಮಕ್ಕಳು ವಿದ್ಯಾವಂತರಾಗಬೇಕಾದರೆ ಶ್ರದ್ದೆ ಮತ್ತು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಹೇಳಿದರು.
ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಹಮ್ಮಿಕೊಂಡಿರುವ ಭಾರತ ಸೇವಾದಳ ಸಪ್ತಾಹಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರದ್ದೆ ಮತ್ತು ಶಿಸ್ತು ಇದ್ದರೆ ಮಾತ್ರ ವಿದ್ಯೆ ಒಲಿಯುತ್ತದೆ, ವಿದ್ಯಾವಂತರಾಗಲು ಸಾಧ್ಯವಾಗುತ್ತದೆ, ಶಿಸ್ತು ಇಲ್ಲದವರು ಬದುಕಿನಲ್ಲಿ ಮುಂದೆ ಬರಲು ಸಾಧ್ಯವಾಗುವುದಿಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಸಪ್ತಾಹದ ಅಂಗವಾಗಿ 7 ದಿನಗಳ ಕಾಲ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ನಾ.ಸು.ಹರ್ಡಿಕರ್ ಅವರ ಬಗ್ಗೆ ಪ್ರಬಂದ ಸ್ಪರ್ಧೆ, ರಾಷ್ಟ್ರ ನಾಯಕರ ಚಿತ್ರ ಬಿಡಿಸುವ ಸ್ಪರ್ಧೆ, ಸೇವಾದಳದ ಉದ್ದೇಶ ಬರೆಯುವುದು, ಧ್ವಜಕ್ಷೇತ್ರ ಮತ್ತು ರಾಷ್ಟ್ರಗೀತೆಯ ಅರ್ಥ ಬರೆಯುವುದು ಸೇವಾದಳದ ಇತಿಹಾಸ ಬರೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಶಿಸ್ತನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭಾರತ ಸೇವಾದಳಕ್ಕೆ ಸೇರಬೇಕು ಎಂದು ಮನವಿ ಮಾಡಿದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶಪ್ಪ, ಶಿಕ್ಷಕರಾದ ಜಯಂತಿ, ಸಾವಿತ್ರಿ ಉಪಸ್ಥಿತರಿದ್ದರು.