ಚಿಕ್ಕಮಗಳೂರು : ಸಂಗೀತವನ್ನು ಆಲಿಸುವುದರಿಂದ ಮನಸ್ಸಿಗೆ ಉಲ್ಲಾಸ ಮೂಡುತ್ತದೆ, ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ರಾಜ್ಯ ಗುಪ್ತವಾರ್ತೆ ಅಧಿಕಾರಿ ಸೋಮಶೇಖರ್ ಹೇಳಿದರು.
ನಾದಚೈತನ್ಯ ಸಂಸ್ಥೆ ನಗರದ ಶೃಂಗೇರಿ ಶಾರದಾ ಶಂಕರಮಠದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ “ಶಿಶಿರೋಲ್ಲಾಸ” ಸುಗಮ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಾಶ್ಚಾತ್ಯ ಸಂಗೀತ ಮನಸ್ಸನ್ನು ಕೆರಳಿಸುತ್ತದೆ ಆದರೆ ಭಾರತೀಯ ಸಂಗೀತ ಮನಸ್ಸನ್ನು ಅರಳಿಸಿ ಗಾಯಕರಿಗೆ ಮತ್ತು ಕೇಳುಗರಿಗೆ ಮುದ ನೀಡುತ್ತದೆ ಹಾಗಾಗಿ ಯುವಜನತೆ ದೇಶೀಯ ಸಂಗೀತಕ್ಕೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಾದಚೈತನ್ಯದ ಅಧ್ಯಕ್ಷ ಸಿ.ಆರ್.ಪ್ರೇಮ್ಕುಮಾರ್ ತಮ್ಮ ಸಂಸ್ಥೆ ಮಕ್ಕಳಿಗೆ ಸಂಗೀತ ಕಲಿಸುವುದರ ಜೊತೆಗೆ ಅವರಲ್ಲಿ ನಮ್ಮ ಸಂಸ್ಕøತಿ ಮತ್ತು ಸಂಸ್ಕಾರವನ್ನು ಬೆಳೆಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಶಂಕರಮಠದ ಆಡಳಿತಾಧಿಕಾರಿ ಚೆನ್ನಕೇಶವ ಕಾರ್ಯಕ್ರಮವನ್ನು ಉದ್ಘಾಟಿಸಿದರು, ನಾದಚೈತನ್ಯದ ವ್ಯವಸ್ಥಾಪಕಿ ರೇಖಾ ಪ್ರೇಮ್ಕುಮಾರ್, ವಾಸಂತಿ ಪದ್ಮನಾಭ್, ಶಿಕ್ಷಕಿ ಕಮಲಾಕ್ಷಿ, ಶಶಿರೇಖಾ ಉಪಸ್ಥಿತರಿದ್ದರು.
ಇದೇ ವೇಳೆ ನಾದಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆದ ಭಾವಗೀತೆ ಮತ್ತು ಭಕ್ತಿಗೀತೆಗಳ ಗಾಯನ ಸಾರ್ವಜನಿಕರ ಗಮನ ಸೆಳೆಯಿತು.










