ಮೂಡಿಗೆರೆ : ತಾಲೂಕಿನ ನಳಂದ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶುಕ್ರವಾರದಂದು “ ಮಾತೆ ಸಾವಿತ್ರಿ ಬಾಯಿಪುಲೆ “ ಅವರ ಜನ್ಮದಿನಾಚರಣೆ ಆಚರಿಸಲಾಯಿತು.
ಎಲ್ಲಾ ರೀತಿಯ ಸಮಾಜದ ಅಭಿವೃದ್ಧಿ ಮನಸ್ಥಿತಿ ಹೊಂದಿರುವ ಶಿಕ್ಷಕರಿಂದ ಮಾತ್ರ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ. ಇದು ಸಾಧ್ಯವೆಂದು ಮೊಟ್ಟ ಮೊದಲು ತೋರಿಸಿಕೊಟ್ಟವರು ಸಾವಿತ್ರಿ ಬಾಯಿ ಪುಲೆ ಅವರು ಎಂದು ಆಂಗ್ಲ ಮಾದ್ಯಮ ಪ್ರೌಢಶಾಲೆ ಮುಖ್ಯೋಪಧ್ಯಾಯರಾದ ವಿ.ವಿ.ಕಣಗಿನಾಳ್ ಅವರು ಹೇಳಿದರು. ಶಿಕ್ಷಣ ಎಂಬುವುದು ಎಲ್ಲಾ ಕ್ರಾಂತಿಗಳಿಗೂ ಪ್ರಮುಖವಾದ ಅಸ್ತ್ರ. ಅದನ್ನು ಸರಿಯಾಗಿ ಬಳಕೆ ಮಾಡಿದರೆ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿದು ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ. ಇದನ್ನು ಅರಿತು ಮಾತೆ ಸಾವಿತ್ರಿ ಬಾಯಿ ಪುಲೆ ಅವರು ಶಿಕ್ಷಣದ ಮೂಲಕ ಸಮಾಜವನ್ನು ಕಟ್ಟುವ ಕೆಲಸಕ್ಕೆ ಕಾರ್ಯಪ್ರವೃತ್ತರಾದರು. ಹಿಂದಿನ ಕಾಲದಲ್ಲಿ ಶಿಕ್ಷಣ ಎಂದರೆ ಸಮಾಜವನ್ನು ಬದಲಾವಣೆಯತ್ತ ಕೊಂಡೊಯ್ದು ಅಭಿವೃದ್ಧಿಯನ್ನು ಕಾಣುವುದಾಗಿತ್ತು. ಆದರೆ ಇಂದಿನ ಬದಲಾದ ಸನ್ನಿವೇಶದಲ್ಲಿ ಶಿಕ್ಷಣ ಎನ್ನುವುದು ಪಠ್ಯ ಪುಸ್ತಕಗಳನ್ನು ಓದಿ ಉತ್ತಮ ಅಂಕಗಳನ್ನು ಗಳಿಸಿ ಕೆಲಸ ಹುಡುಕಿಕೊಳ್ಳುವುದೇ ಆಗಿದೆ ಇದು ನಿಜಕ್ಕೂ ಆತಂಕಕಾರಿ ಎಂದರು.
ನಂತರ ಮಾತು ಮುಂದುವರೆಸಿದ ಅವರು, ಮಹಿಳೆಯರು ಸಾರ್ವಜನಿಕವಾಗಿ ನಿರಾಕರಿಸಲ್ಪಟ್ಟ ಸಂದರ್ಭದಲ್ಲಿ 19 ನೆಯ ಶತಮಾನದಲ್ಲಿ ಸಾವಿತ್ರಿ ಬಾಯಿ ಪುಲೆ ಅವರು ಮುಂಚೂಣಿಯಲ್ಲಿ ನಿಂತುಕೊಂಡು ಮಹಿಳೆಯರ ಮತ್ತು ಮಕ್ಕಳ ಸಶಕ್ತೀಕರಣಕ್ಕಾಗಿ ಹೋರಾಟ ಮಾಡಿದರು. ತಮ್ಮ ಜೀವನದ ಬಹುಭಾಗವನ್ನು ಸಮುದಾಯದ ದಲಿತ ಸಮುದಾಯದವರು, ಅಲ್ಪಸಂಖ್ಯಾತರು, ಮಹಿಳೆಯರು, ಆದಿವಾಸಿಗಳ ಹಕ್ಕುಗಳಿಗಾಗಿ ಮೀಸಲಿಟ್ಟರು. ಈಕೆ ಒಬ್ಬ ಮಹಿಳೆ ಹಾಗೂ ದಲಿತ ವರ್ಗಕ್ಕೆ ಸೇರಿದವಳು ಎಂಬ ಕಾರಣಕ್ಕಾಗಿ ಮೇಲ್ವರ್ಗದ ಪಂಗಡಗಳು ಕೆಸರು ಎರಚುವ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಇದಾವುದಕ್ಕೂ ಎದೆಗುಂದದ ಸಾವಿತ್ರಿ ಬಾಯಿ ಅವರ ಹೋರಾಟದ ಕಾರ್ಯಗಳು ವಿಶ್ವ ತಾಯ್ತನದ ಗುಣವನ್ನು ಪ್ರತಿಬಿಂಬಿಸುವ ಶಕ್ತಿಯಾಗಿ ಹೊರಹೊಮ್ಮಿತು ಎಂದರು.
ನಂತರ ಮಾತನಾಡಿದ ನಳಂದ ಶಾಲೆಯ ದೈಹಿಕ ಶಿಕ್ಷಕ ಜೈಪಾಲ್ ಅವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತ, ಮಾತೆ ಸಾವಿತ್ರಿ ಬಾಯಿ ಪುಲೆ ಅವರ ಶಿಕ್ಷಣ ಮಾದರಿಯು ಪಾಲ್ಗೊಳ್ಳುವಿಕೆ ಹಾಗೂ ಸೃಜನಶೀಲತೆಯಿಂದ ಕೂಡಿತ್ತು. ಹಿಂದಿನಿಂದಲೂ ಮೂಲಭೂತವಾಗಿ ಅಸ್ಥಿತ್ವದಲ್ಲಿ ಇದ್ದ ಏಕ ಮಾದರಿಯ ಹಾಗೂ ಪ್ರತಿಬಂಧಕ ಕಲಿಕೆಗಿಂತ ಇನ್ನು ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡಿದ್ದ ಅವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ವಿದ್ಯಾರ್ಥಿಗಳ ಬಗೆಗಿನ ವಿಭಿನ್ನ ಶೈಲಿಯ ಚಿಂತನೆಯ ಪ್ರತಿಫಲವಾಗಿ ತನ್ನ 11ನೇ ವರ್ಷದಲ್ಲಿಯೇ ದಲಿತ ವರ್ಗದ ‘ಮುಕ್ತಾಭಾಯಿ’ ಎಂಬ ವಿದ್ಯಾರ್ಥಿನಿಯೋರ್ವಳು 1855 ರಲ್ಲಿ “ಮಾಂಗ್ ಹಾಗೂ ಮಹಾರ್ ಸಮುದಾಯ”ದ ಅವ್ಯವಸ್ಥೆಗಳ ಕುರಿತು ‘ಧ್ಯಾನೋದಯ’ ಎಂಬ ಪತ್ರಿಕೆಗೆ ಲೇಖನ ಬರೆಯುವಲ್ಲಿ ಯಶಸ್ವಿಯಾಗಿದ್ದಳು. ನಿರಂತರವಾಗಿ ಮಕ್ಕಳಲ್ಲಿ ಆಧುನಿಕತೆಯ ಚಿಂತನೆಗಳನ್ನು ತುಂಬುವುದರ ಮೂಲಕ ತಳಮಟ್ಟದಲ್ಲಿಯೇ ಬದಲಾವಣೆ ತರಬೇಕು ಎಂಬ ಸಾವಿತ್ರಿ ಬಾಯಿ ಪುಲೆ ಅವರ ಚಿಂತನೆಗಳು ಇಂದಿಗೂ ಅರ್ಥಪೂರ್ಣ. ಇದನ್ನು ಅರಿತು ಎಲ್ಲಾ ಶಿಕ್ಷಕರು ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಉದ್ದೇಶವನ್ನಾಗಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಪ್ರಯುಕ್ತಶಾಲಾ ಮಕ್ಕಳಿಗೆ ಪ್ರಬಂಧ ಸ್ವರ್ಧೆಯನ್ನು ಏರ್ಪಡಿಸಲಾಗಿತ್ತು ಹಾಗೂ ವಿಜೇತರಿಗೆ ಬಹುಮಾನ ವಿರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಗಾಯತ್ರಿ, ಸುರೇಶ್, ಗಣೇಶ್ ಹಾಗೂ ಸಹ ಶಿಕ್ಷಕರಾದ ಇರ್ಫಾನ, ಪಂಚಮಿ, ಅನಿತಾ ಸುಧೀರ್, ಸ್ವಾತಿ ವಿನೋದ್, ಡಾಲಿ, ಅಕ್ಷತಾ, ಶಾಜಿಯಾ ಸೇರಿದಂತೆ ಇತರ ಶಿಕ್ಷಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.










