ಮೂಡಿಗೆರೆ : ಇಂದು ಪಟ್ಟಣದ ಡಾ.ಪಿ.ಎ.ಅಡ್ಯಂತಾಯ ರಂಗಮಂದಿರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಸಂವಿಧಾನ ಸಂರಕ್ಷಣಾ ದಿನಾಚರಣೆ-2020 ಹಾಗೂ ಕೇಂದ್ರ ಸರಕಾರದ ಜನವಿರೋಧಿ ಕರಾಳ ಕಾಯ್ದೆಗಳಾದ ರಾಷ್ಟ್ರೀಯ ಪೌರತ್ವ ನೊಂದಣಿ, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೊಂದಣಿ, ಸಮಾನ ನಾಗರೀಕತ್ವ ಕಾಯ್ದೆ ವಿರೋಧಿಸಿ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅವರು, ಇಡೀ ವಿಶ್ವದಲ್ಲಿ ಭಾರತೀಯ ಸಂವಿಧಾನವೇ ಸರ್ವಶ್ರೇಷ್ಠ ಸಂವಿಧಾನವೆಂದು ಗುರುತಿಸಿಕೊಂಡಿದೆ. ಇಂಗ್ಲೆಂಡ್, ಅಮೆರಿಕಾ ದೇಶಗಳಲ್ಲಿ ಕಪ್ಪು ಜನಾಂಗ ಬಿಳಿ ಜನಾಂಗ ಎಂಬ ಭೇದ ಭಾವದ ಜೊತೆಗೆ ಆಸ್ತಿ ಹೊಂದಿರುವ ನಾಗರೀಕರಿಗೆ ಮಾತ್ರ ಮತದಾನ ಮಾಡುವ ಹಕ್ಕು ಇತ್ತು. ಆದರೆ ಇವುಗಳಿಗೂ ಮುಂಚಿತವಾಗಿ ಎಲ್ಲಾ ನಾಗರೀಕರನ್ನು ಸಮಾನವಾಗಿ ನೋಡಿ ಮತದಾನದ ಹಕ್ಕು ನೀಡಿದ ಶ್ರೇಷ್ಠ ಸಂವಿಧಾನ ನಮ್ಮದು. ಆದರೆ ಇಂದು ಬಿಜೆಪಿ ಪಕ್ಷದ ಕೆಲವು ನಾಯಕರುಗಳ ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ನಮ್ಮ ಸಂವಿಧಾನಕ್ಕೆ ಅಪಾಯ ಉಂಟಾಗುತ್ತಿದೆ. ಸಂವಿಧಾನವನ್ನು ತಮ್ಮ ಕಪಿ ಮುಷ್ಠಿಯಲ್ಲಿ ಹಿಡಿಯಲು ಪ್ರಯತ್ನ ಪಡುತ್ತಿರುವ ಬಿಜೆಪಿ ಪಕ್ಷದ ನಾಯಕರುಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿರುವಂತೆ ‘ ಯಾರು ಇತಿಹಾಸವನ್ನು ಅರ್ಥಮಾಡಿಕೊಳ್ಳುವುದಿಲ್ಲವೋ ಅಂಥವರಿಂದ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ’. ಹಿಂದೂ ರಾಷ್ಟ್ರ ಪರಿಕಲ್ಪನೆಯಲ್ಲಿ ಮುಸ್ಲಿಮರನ್ನು ಕಡೆಗಣಿಸುತ್ತಿರುವುದು ಸರಿ ಅಲ್ಲ ಅಂದು ಅಭಿಪ್ರಾಯ ಪಟ್ಟರು.
ಮಾಜಿ ಸಚಿವ ಬಿ.ಬಿ ನಿಂಗಯ್ಯ ಅವರು ಆಶಯ ನುಡಿ ಮಾತನಾಡುತ್ತಾ, ಸಿ.ಎ.ಎ ಅನ್ನುವುದು ಒಂದು ವಾರದ ಕಾಯ್ದೆ. ಕೇವಲ ಟೇಬಲ್ ವರ್ಕ್ ಮಾಡಿ ಯೋಜನೆ ಜಾರಿಗೆ ತರಲಾಗಿದೆ. ಇಂದಿಗೂ ಕೂಡ 95ರಷ್ಟು ಜನರಿಗೆ ಈ ಕಾಯಿದೆ ಬಗ್ಗೆ ಗೊತ್ತೇ ಇಲ್ಲ. ಜನರಿಗೆ ತಿಳುವಳಿಕೆ ನೀಡಿ, ಕಾಯ್ದೆ ಜಾರಿಗೆ ತರುವ ಬದಲು ಮೋದಿ ಅವರು ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಸದಾ ವಿಶ್ವದ ದೊಡ್ಡಣ್ಣ ಹಾಗೂ ಸಂಘ ಪರಿವಾರಗಳನ್ನು ಮೆಚ್ಚಿಸುವ ಸಲುವಾಗಿ ಕೆಲಸ ಮಾಡುತ್ತಿರುವ ನರೇಂದ್ರ ಮೋದಿ ಮೊದಲು ಜನಸಾಮಾನ್ಯನ ಆಕ್ರೋಷವನ್ನು ಗಮನಿಸಬೇಕು ಎಂದರು.
ಸಮಾವೇಶದಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಡಾ.ಮೋಟಮ್ಮ ಅವರು, ಬಿಜೆಪಿ ಪಕ್ಷದಲ್ಲಿ ಇರುವವರ ಮತಿಭ್ರಮಣೆಯಾಗಿದೆ. ತಾವು ಏನು ಮಾಡುತ್ತಿದ್ದೇವೆ ಎನ್ನುವ ಸಾಮಾನ್ಯ ಜ್ಞಾನ ಕೂಡ ಅವರಿಗೆ ಇಲ್ಲ. ಮೂರಕ್ಷರದ ಅರಿವು ಇಲ್ಲದ ತೇಜಸ್ವಿ ಸೂರ್ಯ ಅಂಥವರು ಸಂವಿಧಾನದ ಬಗ್ಗೆ , ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಮಾತನಾಡುತ್ತಾನೆ. ಸದಾ ಚುಚ್ಚಿ ಮಾತನಾಡುವ ಮನಸ್ಥಿತಿಯೇ ಬಿಜೆಪಿ ಯವರ ಹುಟ್ಟುಗುಣವಾಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಜಾರಿಗೆ ತಂದಿರುವ ಕಾಯ್ದೆಯಲ್ಲಿ ಯಾವುದೇ ದೋಷ ಇಲ್ಲ ಎಂದು ಮನೆಮನೆಗೆ ತೆರಳಿ ವಿವರಣೆ ನೀಡುವ ಅವರು ಜಿ.ಎಸ್.ಟಿ, ನೋಟ್ ಬ್ಯಾನ್ ರಿಸೆಷನ್ ಮುಂತಾದವುಗಳ ವಿಫಲತೆಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಸ್.ಜಯರಾಂ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್, ಅತಿಥಿಗಳಾಗಿ ರಾಜ್ಯ ರೈತ ಸಂಘದ ದುಗ್ಗಪ್ಪಗೌಡ, ಸಿಪಿಐ ಮುಖಂಡ ದೇವವೃಂದ ರವಿ, ರಾಜ್ಯ ಸಿಪಿಐ ಕಾರ್ಯದರ್ಶಿ ಬಿ.ರುದ್ರಯ್ಯ, ಹೊರಟ್ಟಿ ರಘು, ಎಸ್.ಡಿ.ಪಿ.ಐ ಮುಖಂಡ ಫಾರುಖ್, ಸಂವಿಧಾನ ಸಂರಕ್ಷಣಾ ಸಮಿತಿ ಕಾರ್ಯಾಧ್ಯಕ್ಷರುಗಳಾದ ಹೆಚ್.ಜಿ.ಸುರೇಂದ್ರ ಗೌಡ, ಜೆಡಿಎಸ್ ಮುಖಂಡ ರಂಜನ್ ಅಜಿತ್ ಕುಮಾರ್, ಜಾಕಿರ್ ಹುಸೇನ್, ಎಂ.ಪಿ.ಮನು ಗೌಡ, ಉಪಾಧ್ಯಕ್ಷರುಗಳಾದ ಎಲ್.ಬಿ.ರಮೇಶ್,ಮಹಮದ್ ರಫೀಕ್, ಸಿ.ಕೆ. ಇಬ್ರಾಹಿಂ, ಎಂ.ಎಂ.ಲಕ್ಷ್ಮಣ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಮರಗುಂದ ಪ್ರಸನ್ನ, ಎಂ.ಎಸ್.ಅನಂತ್, ಜಕಾರಿಯಾ, ಸಲ್ಲಾವುದ್ದೀನ್, ಹೆಚ್.ಆರ್.ಸಂಪತ್ ಕುಮಾರ್, ಅಬ್ರಹಾರ್ ಅಹಮದ್ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯರುಗಳು ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರುಗಳು ಇದ್ದರು. ಸ್ವಾಗತವನ್ನು ಹೊಸಕೆರೆ ರಮೇಶ್, ನಿರೂಪಣೆಯನ್ನು ಲೋಕವಳ್ಳಿ ರಮೇಶ್, ಸಂವಿಧಾನ ಗೀತೆಯನ್ನು ಬಕ್ಕಿ ಮಂಜುನಾಥ್ ಮತ್ತು ಸಂಗಡಿಗರು ಹಾಡಿದರು.










