ಮೂಡಿಗೆರೆ : ಬಡವರ, ದೀನ ದಲಿತರ, ದುರ್ಬಲರ ನೋವು-ನಲಿವುಗಳಿಗೆ ಸಮಾಜಮುಖಿಯಾಗಿ ಸ್ಪಂದಿಸುವ ಗುಣ ಸ್ಕೌಟ್ಸ್ ಗೈಡ್ಸ್ ಸದಸ್ಯರಲ್ಲಿರುತ್ತದೆ. ಇದನ್ನು ಎಲ್ಲರೂ ರೂಢಿಸಿಕೊಳ್ಳುವುದು ಉತ್ತಮ ಎಂದು ಮೂಡಿಗೆರೆ ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ನೂತನವಾಗಿ ರೋವರ್ಸ್ ಹಾಗೂ ರೇಂಜರ್ಸ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಜಾಗತಿಕ ಸಮಾಜದಲ್ಲಿ ಬಹಳಷ್ಟು ಜನರು ಒಂದು ತುತ್ತಿನ ಅನ್ನಕ್ಕೂ ಪರಿಪಾಟಲು ಪಡುವಂಥಹ ಸ್ಥಿತಿ ಇದೆ. ಇಂಥಹ ದೀನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವವನ್ನು ಯುವ ಜನತೆ ರೂಢಿಸಿಕೊಳ್ಳಬೇಕು. ಇದರ ಜೊತೆಯಲ್ಲಿ ತಮ್ಮ ಸುತ್ತಮುತ್ತಲು ನಡೆಯುತ್ತಿರುವ ಘಟನೆಗಳ ಬಗ್ಗೆ ತಿಳಿದುಕೊಂಡಿರಬೇಕು. ಪ್ರತೀ ನಿತ್ಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಸದಭಿರುಚಿಯ ಕಲೆಗಳತ್ತ ಮನಸ್ಸು ಕೇಂದ್ರೀಕರಿಸಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲೆ ಶ್ರೀಮತಿ ಮಂಜುಳಾ ಅವರು ಮಾತನಾಡುತ್ತಾ, 1907ರಲ್ಲಿ ಲಾರ್ಡ ಬೇಡನ್ ಪೋವೆಲ್ ಅವರು ವಿಶ್ವಕ್ಕೆ ಸ್ಕೌಟ್ಸ್ ನ್ನು ಪರಿಚಯಿಸಿದಾಗ ದೊಡ್ಡ ಮಟ್ಟದ ಚಳುವಳಿ ಆರಂಭವಾಗಿತ್ತು. ಶತಮಾನದ ಆಚರಣೆಯನ್ನು ಮುಗಿಸಿ ಮುನ್ನುಗ್ಗುತ್ತಿರುವ ಇದರ ಚಟುವಟಿಕೆಗಳು ವಿಶ್ವದ 218 ದೇಶಗಳಲ್ಲಿ ಹರಡಿದೆ. ಸ್ಕೌಟ್ಸ್ ಗೈಡ್ಸ್ ಸಂಘಟನೆಯ ಮೂಲ ಧ್ಯೇಯ ಮತ್ತು ಉದ್ದೇಶ ಜನತೆಗೆ ಒಳಿತು ಮಾಡುವುದೇ ಆಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ಸಂಘಟನೆಯ ಬಗ್ಗೆ ವಿಶೇಷವಾದ ಪ್ರಾತಿನಿಧ್ಯವಿದೆ. ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಯುವ ಪೀಳಿಗೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದರ ಜೊತೆಗೆ ಕೌಶಲ್ಯ ಅಭಿವೃದ್ಧಿಯಲ್ಲಿ ವಿಶೇಷವಾಗಿ ಗಮನ ಹರಿಸಲಾಗುವುದು. ಕಬ್ಸ್, ಬುಲ್ ಬುಲ್ಸ್, ಸ್ಕೌಟ್ಸ್ ಗೈಡ್ಸ್ ನಂತರ ಚತುರ್ಥ ಚರಣ್ ಮತ್ತು ಹೀರಕ್ ಪಂಕ್ ಹಂತಕ್ಕೆ ವಿದ್ಯಾರ್ಥಿಗಳು ತಲುಪುತ್ತಾರೆ. ವಿದ್ಯಾರ್ಥಿಗಳು ಈ ಮಟ್ಟಕ್ಕೆ ತಲುಪುವ ವರೆಗೆ ತಮ್ಮ ತರಬೇತಿಯನ್ನು ಮುಂದುವರೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಘಟಕ ನವೀನ್ ಕುಮಾರ್, ತಾಲ್ಲೂಕು ಖಜಾಂಜಿ ಶ್ರೀ ಜೈಪಾಲ್, ಸ್ಕೌಟ್ ಮಾಸ್ಟರ್ ಶ್ರೀ ಬಸವರಾಜ್, ಕಾಲೇಜಿನ ರೋವರ್ ಸ್ಕೌಟ್ ಮುಖಂಡ ಹೇಮಂತ್ ಕುಮಾರ್, ರೇಂಜರ್ ಲೀಡರ್ ಕವಿತಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.










