ಸಿದ್ದರಾಮಯ್ಯ ಹುಲಿಯಾದರೆ, ಬಿ.ಎಸ್. ಯಡಿಯೂರಪ್ಪ ಅವರು ರಾಜಾಹುಲಿ : ಆರ್.ಅಶೋಕ್.

269
firstsuddi

ಬೆಂಗಳೂರು : ಸರ್ಕಾರ ರಚನೆಗೆ ಕಾರಣರಾದವರಿಗೆ ಸಂಪುಟದಲ್ಲಿ ಮೊದಲ ಆಧ್ಯತೆ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡಾ ಹಲವರನ್ನು ಬಿಜೆಪಿಗೆ ಕರೆದುಕೊಂಡು ಬಂದಿದ್ದೇನೆ. ಅವರೆಲ್ಲ ಸಂಚಿವ ಸಂಪುಟ ವಿಸ್ತರಣೆ ಯಾವಾಗ ಎಂದು ಕೇಳುತ್ತಿದ್ದಾರೆ. ಇದನ್ನು ನಾನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದೇನೆ. ಉಪಚುನಾವಣೆಯಲ್ಲಿ ಯಾರೆಲ್ಲಾ ಗೆಲುವು ಸಾಧಿಸಿದ್ದಾರೋ ಅವರಿಗೆಲ್ಲ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಸರ್ಕಾರ ರಚನೆಗೆ ಕಾರಣರಾದವರಿಗೆ ಸಂಪುಟದಲ್ಲಿ ಮೊದಲ ಆಧ್ಯತೆ ನೀಡಲಾಗುತ್ತದೆ. ಉಳಿದವರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚರ್ಚಿಸಿ ತೀರ್ಮಾನಿಸುತ್ತಾರೆ ಎಂದರು.
ಇದೇ ವೇಳೆ ಪಕ್ಷದವರಿಗೆ ಮೋಸ ಮಾಡಿ ಬಿಜೆಪಿಗೆ ಸೇರಿದವರಿಗೆ ತಕ್ಕ ಶಿಕ್ಷೆಯಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಸಿದ್ದರಾಮಯ್ಯ ಹುಲಿಯಾದರೆ, ಬಿ.ಎಸ್. ಯಡಿಯೂರಪ್ಪ ಅವರು ರಾಜಾಹುಲಿ. ಹುಲಿಯಾಗಿಂದ ರಾಜಾಹುಲಿ ದೊಡ್ಡದು, ರಾಜಾಹುಲಿಗೆ ಸರ್ಕಾರ ಹೇಗೆ ನಡೆಸಬೇಕೆಂದು ಗೊತ್ತಿದೆ. ಅತಂತ್ರವಾಗಿರುವುದು ಬಿಜೆಪಿಗೆ ಸೇರಿದವರಲ್ಲ, ಸಿದ್ದರಾಮಯ್ಯ ಅವರು ಅತಂತ್ರರಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರ ಕಾಲೆಳೆದರು.