ಮೂಡಿಗೆರೆ : ಮಾರ್ಗ ಬದಲಿಸಿದ ಧರ್ಮಸ್ಥಳ-ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು : ಪ್ರಯಾಣಿಕರ ಪರದಾಟ…

1194
firstsuddi

ಮೂಡಿಗೆರೆ : ನಿಗಮದ ಪ್ರಾರಂಭದ ದಿನಗಳಿಂದಲೂ ಕೆ.ಎಸ್.ಆರ್.ಟಿ.ಸಿ ನಿಗಮದ ಅವಿನಾಭಾವ ಸಂಬಂಧ ಹೊಂದಿದ್ದ ಮೂಡಿಗೆರೆ ತಾಲ್ಲೂಕಿನ ಪ್ರಯಾಣಿಕರು, ನಿತ್ಯವೂ ಸಂಚಾರ ನಡೆಸುತ್ತಿದ್ದ ಬಸ್ಸುಗಳ ಮಾರ್ಗ ಬದಲಾಯಿಸಿದ ನಿಗಮದ ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರಗಳಿಂದಾಗಿ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಚಾರ್ಮಾಡಿ ಘಾಟ್‍ನಲ್ಲಿ ಭೂಕುಸಿತ ಹಾಗೂ ಗುಡ್ಡ ಕುಸಿತದ ಹಿನ್ನೆಲೆ, ಕೆ.ಎಸ್.ಆರ್.ಟಿ.ಸಿ ನಿಗಮವು ಮೂಡಿಗೆರೆ ಮಾರ್ಗವಾಗಿ ಧರ್ಮಸ್ಥಳ, ಮಂಗಳೂರು, ಉಡುಪಿ ಹಾಗೂ ಕೇರಳ ಭಾಗಗಳಿಗೆ ತೆರಳುತ್ತಿದ್ದ ಬಸ್ಸುಗಳನ್ನು 4ತಿಂಗಳಿನಿಂದ ಬೇಲೂರು-ಸಕಲೇಶಪುರ ಮಾರ್ಗದಲ್ಲಿ ಚಲಿಸುವಂತೆ ಸೂಚಿಸಿದೆ. ಇದರ ಪರಿಣಾಮವಾಗಿ ತಾಲ್ಲೂಕಿನ ಪ್ರಯಾಣಿಕರು ಬಸ್ಸುಗಳ ಕೊರತೆಯಿಂದಾಗಿ ನಿತ್ಯ ನರಕಯಾತನೆ ಪಡುವಂತಾಗಿದೆ.
ಉತ್ತರ ಕರ್ನಾಟಕ ಭಾಗದಿಂದ ಧರ್ಮಸ್ಥಳ, ಮಂಗಳೂರು, ಉಡುಪಿ ಊರುಗಳಿಗೆ ತೆರಳಲು ಮೂಡಿಗೆರೆ ಪ್ರಮುಖ ಹೆದ್ದಾರಿಯಾಗಿದೆ. ಇದು ಮೂಡಿಗೆರೆ ಪಾಲಿಗೆ ನೈಸರ್ಗಿಕವಾದ ಅನುಕೂಲ ಎಂದಲೇ ಬಣ್ಣಿಸಲಾಗುತ್ತದೆ. ಆದರೆ ಈ ಬಾರಿ ಅತೀವೃಷ್ಟಿಯಿಂದಾಗಿ ಚಾರ್ಮಾಡಿ ಘಾಟ್ ಗುಡ್ಡ ಕುಸಿತ ಉಂಟಾಗಿ ಬಂದ್ ಆಗಿದ್ದು ಈಗ ಇತಿಹಾಸ. ಸದ್ಯ ಈ ಮಾರ್ಗದ ಕಾಮಗಾರಿ ಪೂರ್ಣವಾಗಿ ಮುಗಿಯುವವರೆಗೂ ಜಿಲ್ಲಾಡಳಿತ ಬೃಹತ್ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ.
ಇದನ್ನು ಕಾರಣವಾಗಿರಿಸಿಕೊಂಡು ನಿಗಮದ ಅಧಿಕಾರಿಗಳು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ಮಾರ್ಗವಾಗಿ ಚಲಿಸುವಂತೆ ಅಧಿಸೂಚನೆ ನೀಡಿದ ಪರಿಣಾಮ, ತಾಲ್ಲೂಕಿನ ವಿವಿಧ ಭಾಗಗಳಿಂದ ಚಿಕ್ಕಮಗಳೂರು ಹಾಗೂ ರಾಜ್ಯದ ಇತರೆ ಭಾಗಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಸಮಸ್ಯೆಯಾಗಿ ಪರಿಣಮಿಸಿದೆ. ಚಿಕ್ಕಮಗಳೂರಿನಿಂದ ಮೂಡಿಗೆರೆಗೆ ಮಿನಿ ಬಸ್ ಹಾಗೂ ನಿಲುಗಡೆ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿ ವೇಳೆಯಲ್ಲಿ ಈ ಬಸ್ಸುಗಳ ಸಂಚಾರ ಇರುವುದಿಲ್ಲವಾದ್ದರಿಂದ ಹಗಲು ಹೊತ್ತಿನಲ್ಲಿಯೇ ಮನೆ ಸೇರಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ವೇಗದೂತ ಬಸ್ಸುಗಳ ದರವನ್ನೇ ನಿಲುಗಡೆ ಬಸ್ಸುಗಳಿಗೆ ನಿಗದಿಪಡಿಸಿರುವುದು, ದುಪ್ಪಟ್ಟು ಪ್ರಯಾಣದ ಅವಧಿ, ವಿಪರೀತ ನಿಲುಗಡೆಗಳು ಪ್ರಯಾಣಿಕರ ಅಸಮಧಾನಕ್ಕೆ ಕಾರಣವಾಗಿದೆ. ಮೂಡಿಗೆರೆ ಮಾರ್ಗವಾಗಿ ಸಕಲೇಶಪುರಕ್ಕೆ ಉತ್ತಮ ದಾರಿ ಇದ್ದರೂ ಕೂಡ ಕೇವಲ 11 ಕಿ.ಮೀ ಉಳಿಸುವ ಸಲುವಾಗಿ ಪ್ರಾರಂಭದ ದಿನಗಳಿಂದಲೂ ನಿಗಮದ ಜೊತೆ ಅವಿನಾಭಾವ ಸಂಬಂಧ ಇರಿಸಿಕೊಂಡು ಸಹಕರಿಸಿದ ತಾಲ್ಲೂಕಿನ ಪ್ರಯಾಣಿಕರನ್ನು ಗುರಿಪಡಿಸಿರುವುದು ಮಲೆನಾಡಿಗರ ಕೋಪಕ್ಕೆ ಕಾರಣವಾಗಿದೆ.
ಈ ವಿಚಾರವಾಗಿ ಮಾತನಾಡಿದ ನೌಕರ ಯಶವಂತ್ ಅವರು, ನಷ್ಟದ ಕಾರಣ ನೀಡಿ ಮಾರ್ಗ ಬದಲಿಸಿರುವುದು ಅವೈಜ್ಞಾನಿಕವಾಗಿದೆ. ಬೇಲೂರು-ಸಕಲೇಶಪುರ ಮಾರ್ಗಕ್ಕಿಂತಲೂ ಮೂಡಿಗೆರೆ-ಸಕಲೇಶಪುರ ಮಾರ್ಗದಲ್ಲಿ ಬಸ್ಸುಗಳು ಸಂಚಾರ ಮಾಡುವುದು ಆದಾಯದ ದೃಷ್ಟಿಯಿಂದ ಉತ್ತಮ. ಪ್ರತೀನಿತ್ಯ ನಮ್ಮ ಸಮಯಕ್ಕೆ ಬಸ್ಸುಗಳು ಸಿಗದ ಕಾರಣ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅರೆಕಾಲಿಕ ನೌಕರಿಯಲ್ಲಿರುವ ನಾನು ಮೇಲಿನ ಅಧಿಕಾರಿಗಳಿಂದ ನಿತ್ಯ ಬೈಗುಳ ತಿನ್ನಬೇಕಾಗಿದೆ ಎಂದು ನೋವು ತೋಡಿಕೊಂಡರು.
ಪೂರ್ಣಿಮಾ ಮೂರ್ತಿ(ಹೆಸರು ಬದಲಿಸಲಾಗಿದೆ): ನಾನು ಕಾಲೇಜು ವಿದ್ಯಾರ್ಥಿನಿ, ಪ್ರತೀ ನಿತ್ಯ ಕಾಲೇಜು ಪ್ರಾರಂಭವಾಗುವುದರ ಒಳಗೆ ಕ್ಲಾಸಿನಲ್ಲಿರಬೇಕು. ಇಲ್ಲವಾದಲ್ಲಿ ಅಟೆಂಡೆನ್ಸ್ ಕೊಡುವುದಿಲ್ಲ. ಜೊತೆಗೆ ಕಾಲೇಜು ಮುಗಿದ ನಂತರ ಮನೆಗೆ ಹೋಗುವುದೂ ತಡವಾಗುತ್ತಿದೆ. ವೇಗದೂತ ಬಸ್ಸುಗಳ ಬದಲಾಗಿ ನಿಲುಗಡೆ ಬಸ್ಸುಗಳನ್ನು ಬಿಡಲಾಗಿದೆ. ಬಸ್ಸುಗಳ ಅಲಭ್ಯತೆಯಿಂದಾಗಿ ಈ ಬಸ್ಸುಗಳಲ್ಲಿ ವಿಪರೀತ ಜನಸಂದಣಿ ಇರುತ್ತದೆ. ಇದನ್ನೇ ಕಾರಣವನ್ನಾಗಿಸಿಕೊಂಡು ಕೆಲವರು ಮೈ ತಾಗಿಸುವುದು, ಮುಟ್ಟುವುದು ಮಾಡುತ್ತಾರೆ. ಹೆಣ್ಣುಮಕ್ಕಳು ಇಂಥಹ ಸಮಸ್ಯೆಗಳನ್ನು ಯಾರ ಬಳಿ ಹೇಳುವುದಕ್ಕೂ ಸಾಧ್ಯವಾಗುವುದಿಲ್ಲ. ಇಂಥಹ ಸಮಸ್ಯೆಗಳಿಂದಾಗಿ ಎಷ್ಟೋ ಹೆಣ್ಣುಮಕ್ಕಳು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ದಯವಿಟ್ಟು ಅಧಿಕಾರಿಗಳು ಇಂಥಹ ಸೂಕ್ಷ್ಮ ಸಂಗತಿಗಳನ್ನು ಗಮನದಲ್ಲಿ ಇರಿಸಿಕೊಂಡು ಮಾರ್ಗ ಬದಲಿಸಬೇಕು ಎಂದು ಅಳಲು ತೊಡಿಕೊಂಡರು.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಜಯಕರ್ನಾಟಕ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಬಿಳ್ಳೂರು ಮುರಳಿ ಅವರು ಎಸಿ ರೂಮಿನಲ್ಲಿ ಕುಳಿತು ಮಾರ್ಗದ ಬದಲಾವಣೆ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರಿಗಳಿಗೆ ನಾಚಿಕೆ ಆಗಬೇಕು. ಹತ್ತು ದಿನಗಳ ಒಳಗಾಗಿ ಮೂಡಿಗೆರೆ ಮಾರ್ಗವಾಗಿ ಬಸ್ಸುಗಳನ್ನು ಬಿಡದೆ ಇದ್ದರೆ, ತಾಲ್ಲೂಕಿನ ವಿವಿಧ ಸಂಘಟನೆಗಳ ಪ್ರಮುಖರ ಜೊತೆಗೂಡಿ ಖಾಸಗಿ ಬಸ್ಸುಗಳ ಸಂಚಾರ ಆರಂಭ ಮಾಡುವಂತೆ ಸಹಕಾರಿ ಸಂಘಗಳ ಮುಖ್ಯಸ್ಥರುಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಸ್‍ಗಳ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಸಮಸ್ಯೆಯ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿವೆ. ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ನಿಗಮದ ಲಾಭಕ್ಕಿಂತಲೂ ಸಾರ್ವಜನಿಕರ ಸೇವೆ ಮುಖ್ಯವಾಗಬೇಕು. ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವರ ಬಳಿ ನೇರವಾಗಿ ದೂರು ನೀಡಲಾಗುವುದು ಎಂದರು.