ಚಿಕ್ಕಮಗಳೂರು : ವೈದ್ಯರ ನಿರ್ಲಕ್ಷದಿಂದ ಗರ್ಭಿಣಿ ಮಹಿಳೆ ಸಾವು…

1022
firstsuddi

ಚಿಕ್ಕಮಗಳೂರು : ವೈದ್ಯರ ನಿರ್ಲಕ್ಷದಿಂದ ಗರ್ಭಿಣಿ ಮಹಿಳೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ನಡೆದಿದೆ. ಉಷಾ(24) ಮೃತ ಗರ್ಭಿಣಿ ಎಂದು ಗುರುತಿಸಲಾಗಿದ್ದು, ಕೊಪ್ಪ ತಾಲ್ಲೂಕಿನ ನಾರ್ವೆ ಸಮೀಪದ ಹುಲುಗಾರು ಗ್ರಾಮದ ನಿವಾಸಿ ಉಷಾ ಅವರಿಗೆ ನಿನ್ನೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕೊಪ್ಪ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಬಾಲಕೃಷ್ಣ ಅವರಲ್ಲಿ ಗರ್ಭಿಣಿ ಕುಟುಂಬಸ್ಥರು ಎಷ್ಟೇ ವಿನಂತಿಸಿಕೊಂಡರೂ ಈ ಬಗ್ಗೆ ಎಚ್ಚರ ವಹಿಸದೆ ನರ್ಸ್‍ಗಳ ಕೈಯಲ್ಲಿ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ಬಳಿಕ ಮಹಿಳೆಗೆ ತೀವ್ರ ರಕ್ತಸ್ರಾವವಾಗಿದ್ದು, ರಕ್ತಸ್ರಾವ ಹೆಚ್ಚಾಗುತ್ತಲೇ ಇದ್ದುದರಿಂದ ವೈದ್ಯರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಈ ವೇಳೆ ಶಿವಮೊಗ್ಗಕ್ಕೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲೇ ಉಷಾ ಅವರು ಮೃತಪಟ್ಟಿದ್ದು, ಡಾ. ಬಾಲಕೃಷ್ಣ ಅವರ ಬೇಜವಾಬ್ದಾರಿಯಿಂದಲೇ ಗರ್ಭಿಣಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ವೈದ್ಯರ ವಿರುದ್ಧ ದೂರನ್ನು ನೀಡಿ ಡಾ. ಬಾಲಕೃಷ್ಣ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.