ಚಿಕ್ಕಮಗಳೂರು : ಜನಸಾಮಾನ್ಯರಲ್ಲಿ ಕೊರೊನಾ ವೈರಸ್ ಬಗ್ಗೆ ಆತಂಕ ಬೇಡ. ಆದರೆ ಎಚ್ಚರಿಕೆ ವಹಿಸುವುದು ಅತ್ಯವಶ್ಯಕ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಹೇಳಿದ್ದಾರೆ. ಮಂಗಳವಾರ ತಮ್ಮ ಕಚೇರಿಯಲ್ಲಿ ನೋವೆಲ್ ಕೊರೊನಾ ವೈರಸ್ನ ಮುನ್ನೆಚ್ಚರಿಕಾ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ನಮ್ಮ ನೆರೆಯ ದೇಶವಾದ ಚೀನಾದಲ್ಲಿ ವ್ಯಾಪಕವಾಗಿ ಹರಡಿ 427 ಕ್ಕೂ ಹೆಚ್ಚು ಜನ ಮರಣ ಹೊಂದಿರುವ ಬಗ್ಗೆ ವರದಿಗಳಾಗಿವೆ. ಅಲ್ಲದೇ ನಮ್ಮ ಪಕ್ಕದ ರಾಜ್ಯವಾದ ಕೇರಳದಲ್ಲಿ ಕೊರೊನಾ ವೈರಸ್ನಿಂದ ಬಳಲುತ್ತಿರುವುದು ಖಚಿತವಾಗಿದ್ದು, ನಮ್ಮ ಜಿಲ್ಲೆಗೂ ರೋಗ ಹರಡುವ ಸಾಧ್ಯತೆ ಇರುವ ಹಿನ್ನೆಲೆ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಸಾಮಾನ್ಯವಾಗಿ ವೈರಾಣು ಭಾಧಿತರಿಗೆ ವಿಪರೀತ ಜ್ವರ, ತಲೆ ನೋವು, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಬೇಧಿ ಕಂಡುಬರುತ್ತದೆ ಎಂದ ಅವರು ವೈರಸ್ ಸಾಮಾನ್ಯ ಪ್ಲೂ ಹರಡುವ ರೀತಿಯಲ್ಲಿ ಸೋಂಕಿತ ಸೀನಿದಾಗ, ಕೆಮ್ಮಿದಾಗ ಅಂತಹ ವ್ಯಕ್ತಿಯ ಜೊತೆ ನಿಕಟ ಸಂಪರ್ಕ ಹೊಂದಿದಾಗ, ಅಸುರಕ್ಷಿತ ಸ್ಥಳ ಹಾಗೂ ವಸ್ತುಗಳನ್ನು ಸ್ಪರ್ಶಿಸಿ ಕಣ್ಣು, ಮೂಗು, ಬಾಯಿಗಳನ್ನು ಮುಟ್ಟುವುದರಿಂದ ವೈರಸ್ಗಳು ಹರಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಕೈಯನ್ನು ಆಗಾಗ ತೊಳೆದುಕೊಳ್ಳಬೇಕು ಎಂದರು.
ಈ ವೈರಸ್ನ ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಬೇಕು ಹಾಗೂ ಅಲ್ಲಿನ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಅಗತ್ಯವಿರುವ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು. ಪೂರಕ ಔಷಧ ದಾಸ್ತಾನುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದರು.
ಸೋಂಕಿತ ವ್ಯಕ್ತಿಗೆ ಚಿಕಿತ್ಸೆಯನ್ನು ಮೊದಲ ಹಂತ, ಎರಡನೇ ಹಂತ ಹಾಗೂ ಮೂರನೇ ಹಂತದಲ್ಲಿ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುವುದರ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು. ಅಲ್ಲಿನ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು. ಜನಸಾಮಾನ್ಯರಲ್ಲಿ ಕೊರೊನಾ ವೈರಸ್ನ ಲಕ್ಷಣಗಳ ಬಗ್ಗೆ ಅರಿವು ಮೂಡಿಸಬೇಕು. ರೋಗ ಬಾರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಒಳಿತು ಎಂದ ಅವರು ಕೇರಳದಿಂದ ಎನ್.ಆರ್.ಪುರಕ್ಕೆ ಹೆಚ್ಚಿನ ಜನರು ಬಂದು ಹೋಗುವ ಹಿನ್ನೆಲೆಯಲ್ಲಿ ಅಲ್ಲಿ ಪ್ರತ್ಯೇಕ ಕೊಠಡಿಯನ್ನು ತೆರೆಯಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಕೆ. ಪ್ರಭು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಂಜುನಾಥ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ ಬಾಬು, ರೋಗವಾಹಕ ಅಶ್ರಿತ ರೋಗ ನಿವಾರಣಾಧಿಕಾರಿ ಡಾ. ಹರೀಶ್ ಬಾಬು, ನಗರಸಭಾ ಪೌರಾಯುಕ್ತ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಕೊರೊನಾ ವೈರಸ್ ಹರಡುವ ಸಾಧ್ಯತೆ – ಜಿಲ್ಲೆಯಲ್ಲೂ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ…










