ನೆಲ್ಯಾಡಿ : ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 40 ದಿನದ ನವಜಾತ ಶಿಶುವನ್ನು ಝೀರೋ ಟ್ರಾಫಿಕ್‍ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗಾ ಮಗುವನ್ನು ಶಸ್ತ್ರ ಚಿಕಿತ್ಸೆಗಾಗಿ ಇಂದು ಬೆಳಿಗ್ಗೆ 10:30 ಕ್ಕೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್‍ನಲ್ಲಿ ರವಾನಿಸಲಾಗಿದ್ದು, ಪೊಲೀಸರು ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡುವಂತೆ ಮುಂಚಿತವಾಗಿಯೇ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಅದರಂತೆ ಸಾರ್ವಜನಿಕರು ಆ್ಯಂಬುಲೆನ್ಸ್ ಸರಾಗವಾಗಿ ಸಾಗಲು ಸಹಕರಿಸಿದ್ದು, ಯುವಕರು ಸ್ವಯಂ ಸೇವಕರಾಗಿ ನಿಂತು ಆ್ಯಂಬುಲೆನ್ಸ್ ಸುಗಮವಾಗಿ ಸಾಗಲು ದಾರಿ ಮಾಡಿಕೊಟ್ಟಿದ್ದಾರೆ










