ಮೈಸೂರು : ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಿಗ್ಗೆ ಒಂದು ಮಧ್ಯಾಹ್ನ ಒಂದು ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ. ಹೆಚ್.ಡಿ. ಕೋಟೆಯ ಕಂಚಮಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸರ್ಕಾರ ಬೀಳಿಸುವ ಮತ್ತು ಸರ್ಕಾರ ರಚನೆ ಮಾಡುವ ಕಲೆ ಚೆನ್ನಾಗಿ ಗೊತ್ತಿದೆ. ಯಡಿಯೂರಪ್ಪ ಅವರು ಈ ಹಿಂದೆ ಏನೆಲ್ಲಾ ಮಾಡಿದ್ದರು, ಹೇಗೆ ಸರ್ಕಾರ ರಚನೆ ಮಾಡಿದ್ದರು ಎಂಬುವುದನ್ನು ಜನರು ನೋಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ನಾನು ಹೇಳುತ್ತೇನೆ. ಅಲ್ಲದೇ ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬೆಳಿಗ್ಗೆ ಒಂದು ಮಧ್ಯಾಹ್ನ ಒಂದು ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಹಿಂದೆ ಯಡಿಯೂರಪ್ಪ ಅವರು 105 ಜನ ಬಿಜೆಪಿ ಶಾಸಕರು ಕಡುಬು ತಿಂದುಕೊಂಡು ಕೂರುತ್ತಾರಾ? ಎಂದು ಕೇಳಿದ್ದರು. ಮುಂದೆ ಯಾರನ್ನು ಹೊಗಳುತ್ತಾರೆ ಕಾದು ನೋಡಿ, 10 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಿದರೂ ಹೊಗಳುತ್ತಾರೋ ಬಯ್ಯುತ್ತಾರೋ ಎಂದು ನೋಡಿ. ಈಗ 10 ಮಂದಿ ಸಚಿವರಾಗಿದ್ದಾರೆ. ಉಳಿದವರು ಸಮ್ಮನೆ ಇರುತ್ತಾರಾ? ಕೋಡಿ ಮಠದ ಸ್ವಾಮೀಜಿ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಈಗ ಸಮಸ್ಯೆ ಇಲ್ಲ. ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ. ಭವಿಷ್ಯ ನುಡಿಯಲು ನಾನು ಜ್ಯೋತಿಷಿ ಅಲ್ಲ ಎಂದು ಹೇಳಿದರು.










