ಬೀದರ್ ನ ಶಾಹಿನ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ದಾಖಲಿಸಿರುವ ದೇಶದ್ರೋಹದ ಪ್ರಕರಣ ವಾಪಸ್ ಪಡೆಯುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ…

184
firstsuddi

ಬೀದರ್ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಾಣಿ ಕಾಯ್ದೆ ವಿರೋಧಿಸಿ ಬೀದರ್ ಶಾಲೆಯ ಮಕ್ಕಳು ಶಾಲಾ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶಿಸಿರುವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಬೀದರ್ ಶಾಲೆಯ ಮಕ್ಕಳು ತನಗೆ ಇಷ್ಟವಾಗದ ನಾಟಕ ಪ್ರದರ್ಶಿಸಿದರು ಎನ್ನುವ ಕ್ಷುಲಕ ಕಾರಣಕ್ಕೆ ಮಕ್ಕಳು ಮತ್ತು ಹೆತ್ತವರ ಮೇಲೆ ಪೊಲೀಸರನ್ನು ಛೂ ಬಿಟ್ಟು ಹಿಂಸಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ. ಪುಟ್ಟ ಮಕ್ಕಳ ಪ್ರತಿರೋಧವನ್ನು ಎದುರಿಸಲಾಗದಷ್ಟು ಬಿಜೆಪಿ ಸೈದ್ಧಾಂತಿಕವಾಗಿ ದಿವಾಳಿಯಾಗಿದೆ.
ಬೀದರ್ ಶಾಲೆಯ ಮಕ್ಕಳ ನಾಟಕದಲ್ಲಿ ದೇಶದ್ರೋಹ ಕಂಡ ಕುರುಡು ಬಿಜೆಪಿ ಸರ್ಕಾರಕ್ಕೆ ಕಲ್ಲಡ್ಕದ ಶಾಲೆಯಲ್ಲಿ ಮಕ್ಕಳು ಬಾಬರಿ ಮಸೀದಿ ಧ್ವಂಸದ ಕಾರ್ಯಾಚರಣೆಯ ಪ್ರದರ್ಶನ ನೀಡಿ ನೆಲದ ಕಾನೂನನ್ನು ಉಲ್ಲಂಘಿಸಿದ ಮತ್ತು ನ್ಯಾಯಾಲಯವನ್ನು ಅಣಕ ಮಾಡಿದ ಕಿಡಿಗೇಡಿತನ ದೇಶದ್ರೋಹವಾಗಿ ಕಾಣುತ್ತಿಲ್ಲವೇ?
ಸರ್ವಾಧಿಕಾರಿ ದುರ್ಬಲನಾದಷ್ಟು ಕ್ರೂರಿಯಾಗುತ್ತಾನೆ. ದೆಹಲಿ ವಿಶ್ವವಿದ್ಯಾಲಯಗಳಿಗೆ ಪೊಲೀಸರನ್ನು ನುಗ್ಗಿಸಿದ, ಶಾಂತಿಯುತ ಪ್ರತಿಭಟನೆಕಾರರ ಮೇಲೆ ಗುಂಡು ಹಾರಿಸಲು ಪ್ರಚೋದನೆ ನೀಡಿದ ಸರ್ವಾಧಿಕಾರಿ ಮನಸ್ಸೇ ಬೀದರ್ ನಲ್ಲಿ ಪುಟ್ಟಮಕ್ಕಳ ಮೇಲೆ ಸೇಡು ತೀರಿಸಲು ಹೊರಟಿದೆ. ಬೀದರ್ ನ ಶಾಹಿನ್ ವಿದ್ಯಾಸಂಸ್ಥೆ,ವಿದ್ಯಾರ್ಥಿಗಳು ಮತ್ತು ಹೆತ್ತವರ ಮೇಲೆ ದಾಖಲಿಸಿರುವ ದೇಶದ್ರೋಹದ ಪ್ರಕರಣವನ್ನು ಪೊಲೀಸರು ತಕ್ಷಣ ವಾಪಸು ಪಡೆಯಲು ಆಗ್ರಹಿಸುತ್ತಿದ್ದೇನೆ. ಭ್ರಷ್ಟರನ್ನು ಖರೀದಿಸಿ ಅಧಿಕಾರದಲ್ಲಿರುವ ಸರ್ಕಾರ, ಜನವಿರೋಧಿ ಕೃತ್ಯಕ್ಕಿಳಿದರೆ ನಿರೀಕ್ಷೆಗಿಂತ ಮೊದಲೇ ನಾಶವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.