ಮೂಡಿಗೆರೆ:ಕೆ.ಎಸ್.ಆರ್.ಟಿ.ಸಿ ಬಸ್ಸು ಹಾಗೂ ಕಾರು ಅಪಘಾತ : ತಪ್ಪಿದ ಭಾರೀ ದುರಂತ…

709

ಮೂಡಿಗೆರೆ:  ಇಂದು ಮಧ್ಯಾಹ್ನ  ಕೆಎಸ್ ಆರ್ ಟಿಸಿ ಬಸ್ಸ್ ನಿಲ್ದಾಣದ ಬಲಭಾಗದ ಪ್ರವೇಶ ದ್ವಾರದ ಬಳಿ ಸರ್ಕಾರಿ ಬಸ್ಸು  ಮಾರುತಿ 800 ಕಾರಿಗೆ ಢಿಕ್ಕಿಹೊಡೆದ ಘಟನೆ ನಡೆದಿದ್ದು .ಹ್ಯಾಂಡ್ ಪೋಸ್ಟ್ ಕಡೆಯಿಂದ ಬರುತ್ತಿದ್ದ ಕಾರಿಗೆ ಬಸ್ ನಿಲ್ದಾಣದ ಒಳಗೆ ಸಾಗುತ್ತಿದ್ದ ಬಸ್ಸು ವೇಗವಾಗಿ ನುಗ್ಗಿದ್ದು ಪಕ್ಕದಲ್ಲಿಯೇ ಬರುತ್ತಿದ್ದ ಮಾರುತಿ 800 ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ಕಾರು ಭಾಗಶಃ ಜಖಂ ಆಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಕಾರಿನ ಬಲ ಭಾಗ ಹಾಗೂ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದ್ದು, ಅಪಘಾತ ಸಂಭವಿಸಿದ ಕೂಡಲೇ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿ  ಕೆಎಸ್ ಆರ್ ಟಿಸಿ ಚಾಲಕರು ಹಾಗೂ ಸಿಬ್ಬಂದಿಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು. ಇದರ ಪರಿಣಾಮ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. 

ವಿಷಯ ತಿಳಿದ ಕೂಡಲೇ ಮೂಡಿಗೆರೆ ಪೋಲಿಸ್ ಠಾಣೆಯ ಮುಖ್ಯ ಪೇದೆ ಇಮ್ತಿಯಾಜ್ ಪಾಷಾ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಅಪಘಾತಕ್ಕೆ ಒಳಗಾದ ವಾಹನಗಳನ್ನು ಮೂಡಿಗೆರೆ ಪೋಲಿಸ್ ಠಾಣೆಗೆ  ಕೊಂಡೊಯ್ದು ವಿಚಾರಣೆ ನಡೆಸಲಾಯಿತು.

ಹೆಚ್ಚಳಗೊಳ್ಳುತ್ತಿರುವ  ಕೆಎಸ್ ಆರ್ ಟಿಸಿ  ಬಸ್ಸುಗಳ ಅಪಘಾತ: ಕೆಎಸ್ ಆರ್ ಟಿಸಿ ಬಸ್ಸುಗಳ ಚಾಲಕರ ಮೇಲೆ ಸ್ಥಳಿಯರು ಆರೋಪ ಮಾಡುತ್ತಿದ್ದಾರೆ. ಬಹುತೇಕ ಚಾಲಕರು ಬಸ್ಸು ಚಲಾಯಿಸುವಾಗ ತಾವು ಸಾಗುವ ಹಾದಿಯಲ್ಲಿ ದಬ್ಬಾಳಿಕೆಯಿಂದ ವಾಹನ ಚಲಾಯಿಸುತ್ತಿದ್ದು, ಹಲವು ಅಮಾಯಕರು ಅಪಘಾತಕ್ಕೆ ಒಳಗಾಗಿದ್ದಾರೆ. ಅಜಾಗರುಕತೆಯಿಂದ ಹಾಗೂ ಅತೀವೇಗದಿಂದ ವಾಹನ ಚಲಾಯಿಸಿ ಅಪಘಾತ ಮಾಡುತ್ತಿರುವುದರ ಬಗ್ಗೆ ಹಲವು ದೂರು ನೀಡಿದ್ದರೂ ಅಧಿಕಾರಿಗಳು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಲುತ್ತಿಲ್ಲ. ಕೂಡಲೇ ಇತ್ತ ಗಮನಹರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.