8 ತಿಂಗಳ ಬಳಿಕ ಮಗನನ್ನು ಸೇರಿದ ತಾಯಿ – ತಾಯಿಯನ್ನು ಕಂಡು ಕಣ್ಣೀರಿಟ್ಟ ಮಗ…

258
firstsuddi

ಮಡಿಕೇರಿ : ನಾಪತ್ತೆಯಾಗಿದ್ದ ತಾಯಿಗಾಗಿ ಬರೋಬರಿ 3000 ಕಿ.ಮೀ ದೂರದಿಂದ ಬಂದ ಮಗನಿಗೆ 8 ತಿಂಗಳ ಬಳಿಕ ಕಳೆದುಕೊಂಡ ತಾಯಿ ಸಿಕ್ಕಿರುವ ಮನಕಲಕುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ವೃದ್ಧೆ ಮುಕ್ಕು ಮಗನನ್ನು ಸೇರಿದ ತಾಯಿ. 8 ತಿಂಗಳ ಬಳಿಕ ನಾಪತ್ತೆಯಾಗಿದ್ದ ತಾಯಿಯನ್ನು ಕಂಡು ಮಗ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದು, ಇತ್ತ ತಾಯಿಯೂ ಕೂಡಾ ಮಗನನ್ನು ನೋಡಿ ಕಣ್ಣೀರಿಟ್ಟಿದ್ದಾರೆ. ಉತ್ತರ ಪ್ರದೇಶದ ಡಾಣಿಣ್‍ಪುರ್ ಗ್ರಾಮದ ವೃದ್ದೆ ಕಳೆದ 8 ತಿಂಗಳ ಹಿಂದೆ ಜಾತ್ರೆಗೆ ತೆರಳಿದ್ದವರು ಆಕಸ್ಮಿಕವಾಗಿ ರೈಲು ಹತ್ತಿ ಮೈಸೂರಿಗೆ ಬಂದಿದ್ದರು. ಬಳಿಕ ಅಲ್ಲಿಂದ ಮಡಿಕೇರಿಗೆ ಬಂದು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದರು. ಭಿಕ್ಷೆ ಬೇಡುತ್ತಿದ್ದ ವೃದ್ದೆಯನ್ನು ಕಂಡ ತನಲ್ ವೃದ್ದಾಶ್ರಮದ ಮುಖ್ಯಸ್ಥ ಮೊಹಮ್ಮದ್ ಮತ್ತು ಎಫ್‍ಎಂಸಿ ಕಾಲೇಜಿನ ಪ್ರೊಫೆಸರ್ ರಂಗಪ್ಪ ಅವರು ವೃದ್ದೆಯನ್ನು ತನ್ನ ಮಗನ ಬಳಿ ಸೇರಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಕೊನೆಗೂ ಮೊಹಮ್ಮದ್ ಹಾಗೂ ರಂಗಪ್ಪ ಅವರು ವೃದ್ದೆಯ ಮಗನನ್ನು ಕರೆಸಿ ತಾಯಿ ಮಗನನ್ನು ಒಂದು ಮಾಡಿದ್ದಾರೆ. 8 ತಿಂಗಳ ಬಳಿಕ ಒಂದಾದ ತಾಯಿ ಮಗನ ಸಂತಸ ಮುಗಿಲುಮುಟ್ಟಿದೆ.