ಡಾ. ಎಂ.ಎಸ್. ಮಣಿ
ಯುವತಿಯೊಬ್ಬಳು ತನ್ನ ಮೊದಲ ಮಗುವನ್ನು ತನ್ನ ಪತಿ ಕಾರ್ಯನಿರ್ವಹಿಸುವ ಆಸ್ಪತ್ರೆಯಲ್ಲಿಯೇ ಹೆರಬೇಕೆಂದು ಕನಸು ಕಂಡು ದಾಖಲಾಗಿರುತ್ತಾಳೆ. ಆದರೆ ಪ್ರಸವ ಪ್ರಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತದೆ. ತಾಯಿಯಾಗುವ ತವಕದಲ್ಲಿದ್ದ ಯವತಿ ಮತ್ತು ಆಕೆಯ ವೈದ್ಯ ಪತಿ ಇಬ್ಬರೂ `ಸಿಸೇರಿಯನ್’ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆಯಲು ವಿನಂತಿಸಿಕೊಳ್ಳುತ್ತಾರೆ. ಪ್ರಸೂತಿತಜ್ಞರು ಇದನ್ನು ನಿರಾಕರಿಸುತ್ತಾರೆ. ಆಗ ಗರ್ಭಾಶಯ ಸಂಕುಚಿತಗೊಳ್ಳುತ್ತದೆ. ಹೊಟ್ಟೆಯಿಂದ ಹಸುಳೆಯನ್ನು ಬಲವಂತವಾಗಿ ಹೊರತೆಗೆಯುತ್ತಾರೆ. ಮಗು ತಾಯಿಯ ಬಳಿ ಹಾಲು ಹೀರುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ವೈದ್ಯಭಾಷೆಯಲ್ಲಿ ಇದನ್ನು `ಸೆರೆಬ್ರಲ್ ಪ್ಲಾಕ್ಸಿ’ ಎನ್ನುವರು. ಮಗು ಹೀಗಾಗಲು ಸುದೀರ್ಘ ಪ್ರಸವ ಪ್ರಕ್ರಿಯೆ ಕಾರಣವಾಗಿರುತ್ತದೆ. ಹೀಗಾಗಿ ಮಗು 12 ವಾರಗಳ ನಂತರ ಅಸುನೀಗುತ್ತದೆ. ಮಗುವಿನ ಕುಟುಂಬ ಪ್ರಸವದ ಹೊಣೆ ಹೊತ್ತ ವೈದ್ಯರ ಮೇಲೆ `ಅಪರಾಧಿಕ ನಿರ್ಲಕ್ಷ್ಯ’ ಪ್ರಕರಣವನ್ನು ದಾಖಲಿಸುತ್ತಾರೆ.
ಇನ್ನೊಂದು ಪ್ರಕರಣ ಸೆಲ್ವಿ ಎಂಬ ಅಮಾಯಕ ಹೆಣ್ಣಿನದ್ದಾಗಿದೆ. ಈಕೆ ಹೊಟ್ಟೆ ನೋವಿಗಾಗಿ ಮನೆಯ ಬಳಿ ಇರುವ ವೈದ್ಯರ ಬಳಿ ಹೋದಾಗಲೆಲ್ಲಾ `ನೋವು ನಿವಾರಕ’ ಚುಚ್ಚುಮದ್ದು ಕೊಟ್ಟು ಕಳುಹಿಸುತ್ತಿದ್ದರು. ಅತಿಯಾದಾಗ ಬೌರಿಂಗ್ ಆಸ್ಪತ್ರೆಗೆ ಹೋದರೆ, ಅಲ್ಲಿನ ವೈದ್ಯರು `ಪ್ಯಾಂಕ್ರಿಯಾಸ್’ಗೆ ತೊಂದರೆ ಆಗಿದೆ. ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲವೆಂದು ಆಸ್ಪತ್ರೆಯಿಂದ ಹೊರಹಾಕಿದ್ದಾರೆ. ಅಲ್ಲಿಂದ ಚಿನ್ಮಯಾ ಆಸ್ಪತ್ರೆಗೆ ದಾಖಲಾದರೆ, ಅಲ್ಲಿ ತೀವ್ರ ನಿಗಾ ಘಟಕದಲ್ಲಿಟ್ಟು ಅತಿತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಉದರವನ್ನೇ ಕೊಯ್ದು ಹಾಕಿದ್ದಾರೆ. ನಂತರ, ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲವೆಂದು, ಇನ್ನೊಂದು ದಿನ ಬದುಕಿದರೆ ಹೆಚ್ಚೆಂದು ಮನೆಗೆ ಕರೆದೊಯ್ಯಲು ಸಹ ತಿಳಿಸಿದ್ದಾರೆ. ಕೊನೆಗೆ ಸೆಲ್ವಿಯ ಕುಟುಂಬದ ಹಿತೈಷಿಗಳೆಲ್ಲರೂ ಸೇರಿ ವೆಲ್ಲೂರಿನ ಸಿ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲು ಹೋಗಿದ್ದಾರೆ, ಅಲ್ಲಿಯೂ ನೀವು ಬಡವರಿದ್ದೀರಿ, ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ಹೋಗಿ ಎಂಬ ಪುಕ್ಕಟೆ ಸಲಹೆ ಕೊಟ್ಟು ಕಳುಹಿಸಿಕೊಟ್ಟಿದ್ದಾರೆ. ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾದ ಸೆಲ್ವಿ ಸಾವಿನೊಂದಿಗೆ ಹೋರಾಡಿ 15 ದಿನಗಳ ಕಾಲ ಬದುಕುಳಿದು, ಮತ್ತೊಂದು ಶಸ್ತ್ರಚಿಕಿತ್ಸೆ ತಡೆಯಲಾಗದೆ ಕಣ್ಮುಚ್ಚಿದರು. ಸೆಲ್ವಿಯ ಅಂತಿಮ ದರ್ಶನ ಪಡೆಯಲು ಹೋದಾಗ ಅವರ ಅಂಗವಿಕಲ ಪತಿ ಅಂತೋಣಿ `ನನ್ನ ಹೆಂಡತಿಯನ್ನು ಆಸ್ಪತ್ರೆಗಳು ಕೊಂದು ಹಾಕಿವೆ. ನನಗೆ ಇನ್ನ್ಯಾರು ದಿಕ್ಕು. ನನ್ನ ಮಕ್ಕಳನ್ನು ಪೋಷಿಸುವವರಾರು?’ ಎಂಬ ಪ್ರಶ್ನೆಗಳನ್ನೆಸೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅವರನ್ನು ಸಂತೈಸುವ ಶಕ್ತಿ ನನ್ನಲ್ಲಿರಲಿಲ್ಲ. ಆದರೂ ಅವರ ಕಿರಿಯ ಮಗನ ವಿದ್ಯಾಭ್ಯಾಸದ ಹೊಣೆ ಹೊರುವೆ ಚಿಂತಿಸಬೇಡಿ ಎಂದು ಭಾರವಾದ ಹೃದಯದಿಂದ ಸೆಂಜಿಯಿಂದ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆ. ಅದೇಕೋ ಸೆಲ್ವಿ ಇಂದಿಗೂ ನನ್ನನ್ನು ಕಾಡುತ್ತಲೇ ಇದ್ದಾರೆ. ಈಕೆ ನನಗೆ ಒಡಹುಟ್ಟಿಲ್ಲವಾದರೂ ಅದಕ್ಕಿಂತಲೂ ಹೆಚ್ಚು ವಿಶ್ವಾಸ, ಪ್ರಾಮಾಣಿಕತೆಯಿಂದ ಬದುಕಿದ್ದರು. ಇಷ್ಟಕ್ಕೂ ಸೆಲ್ವಿ ಸಾವು ವೈದ್ಯಕೀಯ ದೋಷವೇ? ವೈದ್ಯಕೀಯ ಲೋಪವೇ? ಅನೈತಿಕ ವೈದ್ಯಕೀಯ ಅಭ್ಯಾಸವೇ? ವೈದ್ಯಕೀಯ ನಿರ್ಲಕ್ಷ್ಯವೇ? ಅವಧಿಪೂರ್ವ ಸಾವೇ?
ಇದೇ ರೀತಿ ಬಿಷಪ್ ಕಾಟನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಕ್ಷಯ್ ಎಂಬ ವಿದ್ಯಾರ್ಥಿ ಬೆಂಚಿನಿಂದ ಬಿದ್ದು ಬಲಗೈನ ಎರಡು ಬೆರಳುಗಳಿಗೆ ಚಿಕ್ಕ ಗಾಯ ಮಾಡಿಕೊಂಡಿರುತ್ತಾನೆ. ಗಾಯಕ್ಕೆ ಚಿಕಿತ್ಸೆ ಕೊಡಿಸಲು ಪ್ರತಿಷ್ಠಿತ ಮಲ್ಯ ಆಸ್ಪತ್ರೆಗೆ ಕರೆದೊಯ್ದಿರುತ್ತಾರೆ. ಬೆರಳಿಗೆ ಪ್ಲಾಸ್ಟಿಕ್ ಸರ್ಜರಿ ಅವಶ್ಯಕತೆ ಇದೆ ಎಂದು ಆಪರೇಷನ್ ಥಿಯೇಟರ್‍ಗೆ ಕರೆದೊಯ್ಯುತ್ತಾರೆ. ಅಲ್ಲಿ ನೀಡಿದ ಅರವಳಿಕೆ ಚುಚ್ಚುಮದ್ದಿನ ಅಡ್ಡ ಪರಿಮಾಮದಿಂದ ಕೋಮಾ ಸ್ಥಿತಿಗೆ ತಲುಪುತ್ತಾನೆ. ಅಲ್ಲಿಂದ ಅಕ್ಷಯ್‍ನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸುತ್ತಾರೆ. ಅಕ್ಷಯ್ ಅಲ್ಲಿ ಇಹಲೋಕ ತ್ಯಜಿಸುತ್ತಾನೆ. ಯಶವಂತಪುರದ ಮಂಗಳಾ ನರ್ಸಿಂಗ್ ಹೋಮ್‍ಗೆ ಅನಾರೋಗ್ಯದಿಂದ ಬಳಲುತ್ತಿದ್ದ ಸಲ್ಮಾ ಎಂಬುವರನ್ನು ದಾಖಲಿಸಲಾಗಿತ್ತ್ತು. ಐದು ದಿನ ಚಿಕಿತ್ಸೆ ನೀಡಿದ ವೈದ್ಯರು ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿಲ್ಲ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಬಳಿಕ ಸಲ್ಮಾ ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಲ್ಮಾ ಸಾವನ್ನಪ್ಪಿದರು. ವೈದ್ಯರು ಸಲ್ಮಾ ಜೀವಕ್ಕೆ ಅಪಾಯ ತರುವ ಔಷಧ ನೀಡಿದ್ದಾರೆಂದು ಆಕೆಯ ಸಂಬಂಧಿಕರು ತವರು ಮನೆ ಸುಂಕನಹಳ್ಳಿಗೆ ಹೋಗಿದ್ದರು. ಅಲ್ಲಿನ ಗುಡೇಕೋಟಿ ಆರೋಗ್ಯ ಕೇಂದ್ರದಲ್ಲಿ ಡಾ|| ಪ್ರಕಾಶ್ ರೆಡ್ಡಿ ನೇತೃತ್ವದಲ್ಲಿ `ಸಂತಾನಹರಣ ಶಸ್ತ್ರಚಿಕಿತ್ಸೆ’ ಶಿಬಿರ ನಡೆಯುತ್ತಿತ್ತು. ಮೂರು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಎರಡು ಮಕ್ಕಳ ತಾಯಿ ಜಯಮ್ಮ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದರು. ಅಲ್ಲಿ ನೀಡಿದ ಅರವಳಿಕೆ ಚುಚ್ಚುಮದ್ದು ವ್ಯತಿರಿಕ್ತ ಪರಿಣಾಮ ಬೀರಿ ಆಕೆಯ ಜೀವವನ್ನೇ ತೆಗೆದಿದೆ. ಘಟನೆಗೆ ಸಂಬಧಿಸಿದಂತೆ ತ್ರಿಸದಸ್ಯ ಸಮಿತಿ ರಚಿಸಿದ ಅಂದಿನ ಆರೋಗ್ಯ ಸಚಿವ ಖಾದರ್ ಕೈತೊಳೆದುಕೊಂಡು ಮಾಜಿಯಾಗಿಬಿಟ್ಟಿದ್ದಾರೆ. ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಪ್ರಸವಕ್ಕೆಂದು ದಾಖಲಾಗಿದ್ದ ಪಾಂಗಳದ ಸದಾಡಿಯ ಶ್ರುತಿ ಸುವರ್ಣ ಅವರಿಗೆ ಪ್ರಸೂತಿತಜ್ಞೆ ಛಾಯಾಲತಾ ಶಸ್ತ್ರಚಿಕಿತ್ಸೆ ಮಾಡಿ, ಮಗು ಹೊರತೆಗೆದರು. ತಾಯಿ-ಮಗು ಆರೋಗ್ಯಪೂರ್ಣವಾಗಿದೆ ಎಂಬ ನಾಟಕವಾಡಿ, ನಂತರ ಉಡುಪಿಯ ಮಣಿಪಾಲಕ್ಕೆ ಕಳುಹಿಸಿಕೊಟ್ಟರು. ಅಲ್ಲಿ ಶ್ರುತಿಸುವರ್ಣ ಅಸುನೀಗಿದ್ದಾರೆ. ಇವರ ಪತಿ ಹಿರಿಯಡ್ಕದ ಸಂದೀಪ್ ಕನಿಷ್ಠ ಸ್ಕ್ಯಾನಿಂಗ್ ಕೂಡ ಮಾಡದೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರಿಂದಲೇ ಸಾವು ಸಂಭವಿಸಿದೆ. ಇದಕ್ಕೆ ವೈದ್ಯರೇ ಹೊಣೆ ಎಂದಿದ್ದರು. ಇನ್ನೂ ಇತ್ತೀಚೆಗೆ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 24 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇವರುಗಳ ಶಸ್ತ್ರಚಿಕಿತ್ಸೆಗೆ ಆ್ಯಕ್ಯುಜೆಲ್ 2%(ಬ್ಯಾಚ್ ನಂ. ಒಯುವಿ190203)ನ ಜೆಲ್‍ನ್ನು ಬಳಸಲಾಗಿತ್ತು. ಇದನ್ನು ಆರೋಗ್ಯ ಇಲಾಖೆ ನಿಷೇಧಿಸಿತ್ತು. ಇದರ ಪರಿಮಾಮ 19 ಜನ ಕಣ್ಣು ದೃಷ್ಟಿಶೂನ್ಯರಾಗಿಬಿಟ್ಟಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ರುದ್ರೇಶ್ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರ ಮೇಲೆ ಐಪಿಸಿ 338ರಡಿ ಗಂಭೀರ ಸ್ವರೂಪದ ಗಾಯಗೊಳಿಸಿರುವ ಆರೋಪದ ಮೇಲೆ ದೂರು ನೀಡಿದ್ದರು. ಈ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಬೇಕೆಂದು ಇಂಧನ ಸಚಿವರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರು ಪ್ರತಿಪಕ್ಷದ ನಾಯಕರಾಗಿದ್ದಾಗ ಆಗ್ರಹಿಸಿದ್ದರು. ಇಂತಹ ದುರ್ಘಟನೆಗಳು ನಡೆಯಲು ಕಾರಣ ನಿರ್ಣಯ ತೆಗೆದುಕೊಳ್ಳುವಲ್ಲಿ ವೈಫಲ್ಯವೂ ಇರಬಹುದು.
ಗಾಯಗೊಂಡ, ಅಸ್ವಸ್ಥಗೊಂಡ ರೋಗಿಯೊಬ್ಬ ವೈದ್ಯರ ಬಳಿ ಹೋಗುತ್ತಿದ್ದಂತೆ, ವೈದ್ಯ ರೋಗಿಯನ್ನು ಸೆಳೆಯುತ್ತಾನೆ. ಉದಾತತ್ತೆಯ ವ್ಯಕ್ತಿತ್ವವನ್ನು ತೋರುತ್ತಾನೆ. ದೈವಭಕ್ತಿಯನ್ನು ಮೂಡಿಸುತ್ತಾನೆ. ಹೀಗಾಗಿ ರೋಗಿ ವೈದ್ಯರ ಬಳಿ ಸಾಗಿದರೆ ನಿಶ್ಚಿಂತೆಯ ಭಾವ ಮೂಡುತ್ತದೆ. ಸುರಕ್ಷಿತ ತಾನೆಂಬ ಸಂತಸ ರೋಗಿಯಲ್ಲಿ ಕಾಣಿಸುತ್ತದೆ. ಹೀಗಿದ್ದರೂ ವೈದ್ಯರ ಮೇಲೆ ಅಸಹನೆಯ ಕೂಗು ಎದ್ದಿದೆ? ರೋಗಿಗಳನ್ನು ವೈದ್ಯರಿಂದ ಮತ್ತವರ ವೃತ್ತಿಧರ್ಮ ವಿರೋಧಿ ನಿಲುವಿನಿಂದ ಕಾಪಾಡುವ ಸ್ಥಿತಿ ಏಕೆ ಬಂತು? ರೋಗಿಯ ರಕ್ತ ಸಂಬಂಧಿಗಳ ದಾಳಿಯಿಂದ ವೈದ್ಯರನ್ನು ಕಾಪಾಡುವ ಸ್ಥಿತಿ ಏಕೆ ನಿರ್ಮಾಣವಾಯಿತು? ಇವೆಲ್ಲ ಪ್ರಶ್ನೆಗಳ ಬಗ್ಗೆ ವೈದ್ಯರಿಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಜನರ ಜೀವ ಉಳಿಸುವ ವೈದ್ಯ, ಅದೇ ಜನರಿಂದ ತಮ್ಮ ಜೀವ ಕಾಪಾಡಿಕೊಳ್ಳುವ ಬರ್ಬರ ಪ್ರಸಂಗ ಉಂಟಾಗಿದೆ. ಜನರ ಸಂರಕ್ಷಕನಾಗದಬೇಕಾದ ವೈದ್ಯವೃತ್ತಿ “ನೀರು ಬಾಯಾರಿಕೆ’’ ಎಂದು ಕೂಗಾಡುವಂತಾಗಿದೆ.
ನಮ್ಮ ದೇಶವನ್ನು ಒಳಗೊಂಡಂತೆ ಆರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿ ವೈದ್ಯಕೀಯ ದೋಷಗಳಿಂದ ಪ್ರತಿಷರ್ವ 138 ಮಿಲಿಯನ್ ಜನ ಹಾನಿಗೀಡಾಗುತ್ತಿದ್ದಾರೆ. ಇಂತಹ ಭೀತಿ ಮೂಡಿಸುವ ಅಂಕಿಅಂಶ ಬಿಡುಗಡೆಗೊಳಿಸಿರುವುದು ವಿಶ್ವ ಆರೋಗ್ಯ ಸಂಸ್ಥೆ.
ನಮ್ಮ ದೇಶದಲ್ಲಿ ಪ್ರತಿ ವರ್ಷ 52 ಲಕ್ಷ ಜನ ವೈದ್ಯಕೀಯ ಗಾಯಗಳಿಗೆ ಈಡಾಗುತ್ತಿದ್ದಾರೆಂದು ಹಾರ್ವರ್ಡ್ ವಿಶ್ವವಿದ್ಯಾಲಯ 2013ರಲ್ಲಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಅಮೆರಿಕಾದಲ್ಲಿ `ವೈದ್ಯಕೀಯ ದೋಷ’ ಸಾವಿಗೆ 3ನೇ ಕಾರಣವಾಗಿದೆ. 2013ರಲ್ಲಿ ಹೀಗೆ ಜೀವ ಬಿಟ್ಟವರ ಸಂಖ್ಯೆ 4 ಲಕ್ಷ. ಇದನ್ನು ಕಂಡಾಗ ಇದೊಂದು ಅಸಾಧಾರಣ ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂಬುದು ಕಂಡುಬರುತ್ತದೆ. ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಗಣನೀಯ ವೆಚ್ಚವನ್ನು ಕೂಡ ತೋರಿಸುತ್ತದೆ. ಈ ಸಮಸ್ಯೆಯ ವಿಶ್ಲೇಷಣೆಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಭಯ ಹುಟ್ಟಿಸುವಂತಹ ಅಂತರ ಇರುವುದನ್ನು ಕೂಡ ತೋರಿಸುತ್ತದೆ.
ನಾವಿಂದು ವೈದ್ಯಕೀಯ ಚಿಕಿತ್ಸೆಯ ಅಡ್ಡ ಪರಿಣಾಮವನ್ನು ಬೇಕಿದ್ದರೆ ತಡೆಯಬಹುದು. ಆದರೆ, ವೈದ್ಯಕೀಯ ದೋಷದಿಂದ ಹಾನಿಗೀಡಾಗುತ್ತಿರುವ ರೋಗಿಯನ್ನು ಕಾಪಾಡಲು ಆಗುತ್ತಿಲ್ಲ. ಇದಕ್ಕೆಲ್ಲವೂ ಕಾರಣ ಸೂಕ್ತ ಮಾರ್ಗ ಮತ್ತು ವಿಧಾನದಲ್ಲಿ ಚಿಕಿತ್ಸೆ ನೀಡದಿರುವುದಾಗಿದೆ. ಅಲ್ಲದೆ ತಪ್ಪು ಔಷಧ ಅಥವಾ ತಪ್ಪು ಪ್ರಮಾಣದಲ್ಲಿ ಔಷಧ ನೀಡುವುದು, ಗುಣಪಡಿಸಬಹುದಾದ ಸೋಂಕನ್ನು ಅಸಮರ್ಪಕವಾಗಿ ನಿರ್ವಹಿಸುವುದು ಕಾರಣವಾಗಿದೆ. ಹಾಸಿಗೆ ಹಿಡಿದವರನ್ನು ಬೇಜವಾಬ್ದಾರಿಯಿಂದ ನೋಡಿಕೊಳ್ಳುವುದರಿಂದ ಹಾಸಿಗೆ ಹುಣ್ಣುಗಳಾಗುತ್ತವೆ. ಮುಖ್ಯವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾದ ಅಂಗವನ್ನು ಬಿಟ್ಟು ಬೇರೆ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡುವ ಲೋಪವೂ ಕಾರಣವಾಗಿದೆ. `ವೈದ್ಯಕೀಯ ದೋಷ’ ಎಂಬುದು `ವೈದ್ಯರ ನಿರ್ಲಕ್ಷ್ಯ’ದಿಂದ ಮಾತ್ರವೇ ಘಟಿಸುವುದಿಲ್ಲ. ಅಂದರೆ ವೈದ್ಯ ತನ್ನ ಕರ್ತವ್ಯವನ್ನು ಉಲ್ಲಂಘಿಸಬಾರದು. ಸಂಪೂರ್ಣ ತಿಳುವಳಿಕೆಯನ್ನು ಹೊಂದಿರಬೇಕು. ತಪ್ಪು ತಿಳುವಳಿಕೆ ಮತ್ತು ತಪ್ಪು ನಿರ್ಣಯಗಳನ್ನು ಕೂಡ ರೋಗಿಯ ಪ್ರಾಣಕ್ಕೆ ಎರವಾಗುತ್ತವೆ. ನಮ್ಮಲ್ಲಿ ನಿಗಾವಹಿಸುವುದಿಲ್ಲ. ಸಾಮಥ್ರ್ಯವಿಲ್ಲದ ವ್ಯವಸ್ಥೆ ಇದೆ ಎಂದು ಸಾರಾಸಗಟಾಗಿ ಹೇಳಲು ಕೂಡ ಆಗುವುದಿಲ್ಲ.

2017ರಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿರುವ ಪ್ರತಿಷ್ಠಿತ `ಮ್ಯಾಕ್ಸ್’ ಎಂಬ ಖಾಸಗಿ ಆಸ್ಪತ್ರೆ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿನ ದುಷ್ಕೃತ್ಯಗಳನ್ನು ಮತ್ತು ಕಳಪೆ ಹಾಗೂ ನಿಯಂತ್ರಿತವಲ್ಲದ ಧೋರಣೆಯನ್ನು ಜಗಜ್ಜಾಹೀರುಗೊಳಿಸಿತ್ತು. ಇಷ್ಟಕ್ಕೂ ಇಲ್ಲಿ ನಡೆದಿದ್ದೇನೆಂದರೆ, ಅವಧಿಪೂರ್ವದಲ್ಲಿ ಜನಿಸಿದ ಅವಳಿ-ಜವಳಿ ಮಕ್ಕಳನ್ನು ಪರೀಕ್ಷಿಸಿ, ಅಸುನೀಗಿವೆ ಎಂದು ವರದಿ ನೀಡಿಬಿಟ್ಟರು. ಅಂತ್ಯಕ್ರಿಯೆಗೆ ಕೊಂಡೊಯ್ಯುವಾಗ ಮಕ್ಕಳೆರಡು ಕದಲಿ ತಮ್ಮ ಇರುವಿಕೆಯನ್ನು ತೋರಿದವ. ಕದಲಿಕೆಯ ಶಿಶುಗಳೆರಡನ್ನು ಮತ್ತೆ ಆಸ್ಪತ್ರೆಗೆ ಹೊತ್ತು ತಂದರಾದರೂ ಶಿಶುಗಳೆರಡು ಬಹಳ ಕಾಲ ಉಳಿಯಲಿಲ್ಲ. ಇವೆರಡಕ್ಕೆ ಸಕಾಲದಲ್ಲಿ ದೊರೆಯಬೇಕಾದ ವೈದ್ಯಕೀಯ ನೆರವು ದೊರಯದೆ, ವಂಚನೆಗೆ ಒಳಗಾಗಿದ್ದರಿಂದ ಮಕ್ಕಳು ಪ್ರಾಣ ಬಿಟ್ಟಿವೆ. ಜೊತೆಗೆ ಹಾಳಾಗೆದ್ದು ಹೋಗಿರುವ ನಮ್ಮ ವೈದ್ಯಕೀಯ ಸಂಸ್ಥೆ ಮತ್ತು ಕಾರ್ಯಾಂಗದೊಳಗಿನ ದುರಾದೃಷ್ಟಗಳನ್ನು ಸಾರಿ ಹೇಳಿವೆ. ಇದೊಂದು ಘಟನೆ ಕಾರ್ಪೊರೇಟ್ ಆಸ್ಪತ್ರೆಗಳನ್ನು, ಸರ್ಕಾರಿ ಆಸ್ಪತ್ರೆಗಳೊಂದಿಗೆ ಹೋಲಿಸಿ ನೋಡುವಂತಾಗಿದ್ದು ನಿಜಕ್ಕೂ ವಿಷಾದದ ಸಂಗತಿ. ಬದುಕುಳಿಯುವ ಎಲ್ಲಾ ಅರ್ಹತೆ ಹೊಂದಿದ ಮಕ್ಕಳ್ನು ಅಸುನೀಗಿವೆ ಎಂದು ಅಂತ್ಯಕ್ರಿಯೆಗೆ ಕಳುಹಿಸಿದ ಘಟನೆ, ನಿಜಕ್ಕೂ ತಲೆತಗ್ಗಿಸುವ ನಾಚಿಕೆಗೇಡಿತನದ ಘಟನೆ. ಹಾಗಂತ ವೈದ್ಯನೊಬ್ಬನ ಪ್ರಮಾದಕ್ಕೆ ಒಂದಿಡಿ ಆಸ್ಪತ್ರೆಯನ್ನೇ ಮುಚ್ಚಲು ಹೊರಟ ಅಲ್ಲಿನ ಸರ್ಕಾರದ ನಿರ್ಧಾರ ಕೂಡ ಏಕಪಕ್ಷೀಯವಾದದ್ದು. ಆಸ್ಪತ್ರೆ ಮುಚ್ಚಲು ಹೊರಟರೆ, ದೇಗುಲ ಎಂದು ಭಾವಿಸಿರುವ ರೋಗಿಗಳ ಗತಿ ಏನಾಗಬಾರದು.
ಇದೇ ವೇಳೆಯಲ್ಲಿ ಮೂರು ಘಟನೆಗಳು ಘಟಿಸಿವೆ. ಒಂದು ಪೋರ್ಟಿಸ್ ಆಸ್ಪತ್ರೆಯಲ್ಲಿ. ಆಸ್ಪತ್ರೆಯ ಶುಲ್ಕಕ್ಕಿಂತ 700 ಪಟ್ಟು ಹೆಚ್ಚು ವಿಧಿಸಿದುದ್ದಾಗಿದೆ. ಎರಡನೆಯದು ಬಿಎಲ್‍ಕೆ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ `ಸೋಂಕು’ ಉಂಟಾಗಿದೆ ಎಂದು ಪ್ರತ್ಯೇಕವಾಗಿಟ್ಟು ಜೀವತೆಗೆದರು. ಮೂರನೆಯದು ದೆಹಲಿಯ ಗುರುಗ್ರಾಮದಲ್ಲೊಂದು ಹುಡುಗಿ ಸೋಂಕು ಪೀಡಿತ ಜ್ವರದಿಂದ ಪ್ರಾಣ ಬಿಟ್ಟಾಗ ಆಸ್ಪತ್ರೆ 14 ಲಕ್ಷ ಬಿಲ್ ಮಾಡಿತ್ತು. ಕೊನೆಗೆ ಸರ್ಕಾರ ಆಸ್ಪತ್ರೆ ಮುಚ್ಚುವುದಾಗಿ ಬೆದರಿಸಿತ್ತು. ಈ ಮೂರು ಆಸ್ಪತ್ರೆಗಳು ದೆಹಲಿಯಲ್ಲಿಯೇ ಇವೆ. ಮೂರು ಮಾತ್ರವಲ್ಲ, ದೇಶದ ಉದ್ದಗಲ ಇರುವ ಬಹುತೇಕ ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿದು ತಿನ್ನುತ್ತವೆ ಎಂಬ ಕುಖ್ಯಾತಿಗೆ ಗುರಿಯಾಗಿದೆ. ಅವಶ್ಯಕತೆ ಇಲ್ಲದಿದ್ದರೂ, `ದೇಹ ಕೊಯ್ದು ಶಸ್ತ್ರಚಿಕಿತ್ಸೆ’ಯ ಶಾಸ್ತ್ರ ಮುಗಿಸುತ್ತಿವೆ. ಇದರಿಂದಾಗಿ ಜನ ವೈದ್ಯಕೀಯ ಕ್ಷೇತ್ರದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲವೂ ಸರ್ಕಾರ ಆರೋಗ್ಯ ಕ್ಷೇತ್ರದತ್ತ ತೋರುತ್ತಿರುವ ನಿರ್ಲಕ್ಷ್ಯ ಮನೋಭಾವನೆ ಕಾರಣವಾಗಿದೆ. ಇಲ್ಲಿ `ಪರಿವೀಕ್ಷಣಾ ವ್ಯವಸ್ಥೆ’ ಎಂಬುದೇ ಇಲ್ಲವಾಗಿದೆ.
ಇವೆಲ್ಲಕ್ಕೂ ಇತಿಶ್ರೀ ಹಾಡಲು ದೆಹಲಿ ಸರ್ಕಾರ 42 ಖಾಸಗಿ ಆಸ್ಪತ್ರೆಗಳಿಗೆ ಉಚಿತವಾಗಿ ಭೂಮಿಯನ್ನು ಮಂಜೂರು ಮಾಡಿತ್ತು. ಮಂಜೂರು ಮಾಡುವಾಗ ರೋಗಿಗಳ ಅನುಪಾತಕ್ಕನುಗುಣವಾಗಿ `ಉಚಿತ ಚಿಕಿತ್ಸೆ’ಯನ್ನು ನೀಡಬೇಕೆಂಬ ಷರತ್ತು ವಿಧಿಸಿತ್ತು. ಇದನ್ನು ಬಹುತೇಕ ಆಸ್ಪತ್ರೆಗಳು ಪಾಲಿಸುತ್ತದೆ ಎಂಬುದು ನೂರಕ್ಕೆ ನೂರರಷ್ಟು ಸುಳ್ಳಿನಿಂದ ಕೂಡಿದೆ. ಕಾರ್ಪೊರೇಟ್ ಆಸ್ಪತ್ರೆಗಳ ಮೂಲ ಸ್ವಭಾವವೇ ಲೋಭದಿಂದ ಕೂಡಿರುತ್ತದೆ. ಇದರ ಧಣಿಗಳಿಗೆ ನಿಯಮಾವಳಿ ಮುರಿಯುವ ಕಲೆ ರಕ್ತಗತವಾಗಿರುತ್ತದೆ. ರಂಗೋಲಿ ಕೆಳಗಡೆ ನುಸುಳಿ ಹೊರಬರುವ ವಿದ್ಯೆಯೂ ಇವರಿಗೆ ಗೊತ್ತಿರುತ್ತದೆ. ಅದರಲ್ಲೂ ರಾಜಕಾರಣಿಗಳ ನಂಟಿದ್ದರಂತೂ ಅಲ್ಲಿ `ಅಪವಿತ್ರ ಮೈತ್ರಿ’ ಇದ್ದೇ ಇರುತ್ತದೆ. ಇನ್ನೂ ಮಠಾಧೀಶರ ಆಸ್ಪತ್ರೆಯಾದರಂತೂ ಯಾವುದೇ ಸರ್ಕಾರ ಇದ್ದರೂ `ದರೋಡೆ’ ದುಪ್ಪಟ್ಟಾಗಿರುತ್ತದೆ. ಸರ್ಕಾರದ ಭೂಮಿ, ಭಕ್ತರ ದುಡ್ಡಲ್ಲಿ ಎದ್ದ ಕಟ್ಟಡ, ಜೀವ ಭಯದಿಂದ ಸಾಲ ಮಾಡಿ ತಂದು ಸುರಿಯುವ ಭಕ್ತ ಇರುವಾಗ ಇನ್ಯಾವ ಉದ್ಯೋಗ ಬೇಕು. ಇಂತಹ ಬುಕ್ಕಣ್ಣರು ಹಗಲು ದರೋಡೆ ಮಾಡಲು ಸರ್ಕಾರಿ ಆಸ್ಪತ್ರೆಯ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ. ಸರ್ಕಾರಿ ಆಸ್ಪತ್ರೆಯೊಳಗಿನ ಕೊಳಕು ಬಾಕರಿಂದಾಗಿ ಖಾಸಗಿ ಆಸ್ಪತ್ರೆಗಳು ವಿಜೃಂಭಿಸುತ್ತಿವೆ.
ನಮ್ಮಲ್ಲಿ ವಿಕ್ಟೋರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎದ್ದು ನಿಲ್ಲುವ ಮೊದಲು ಮಣಿಪಾಲ್, ಮಲ್ಯ ಆಸ್ಪತ್ರೆಗಳೇ ಜೀವ ಉಳಿಸುವ ದೇಗುಲದಂತೆ ಕಾಣುತ್ತಿದ್ದವು. ಇಲ್ಲಿನ ಪಂಚತಾರಾ ವ್ಯವಸ್ಥೆ ನಮ್ಮ ಸರ್ಕಾರಿ ಆಸ್ಪತ್ರೆಗಳನ್ನು ಇಂದಿಗೂ ಅಣಕಿಸುತ್ತವೆ. ಅದರಲ್ಲೂ ದೂರದ ಪಟ್ಟಣಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳು ಪಶು ಆಸ್ಪತ್ರೆಗಿಂತಲೂ ಕೀಳಾಗಿವೆ. ಉದಾಹರಣೆಗೆ ಪ್ರಧಾನಿಗಳ ಸ್ವಂತ ರಾಜ್ಯವಾದ ಗುಜರಾತ್‍ನ ರಾಜ್‍ಕೋಟ್ ಮತ್ತು ಅಹಮದಾಬಾದ್‍ನ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂರು ತಿಂಗಳಲ್ಲಿ 522 ಶಿಶುಗಳು ಮೃತಪಟ್ಟಿವೆ. ರಾಜಸ್ತಾನದ ಜೋಧ್‍ಪುರದ ಉಮೈದ್ ಹಾಗೂ ಎಂಡಿಎಂ ಸರ್ಕಾರಿ ಆಸ್ಪತ್ರೆಯಲ್ಲಿ ಡಿಸೆಂಬರ್ ಒಂದೇ ತಿಂಗಳಲ್ಲಿ 146 ಶಿಶುಗಳು, ಕೋಟದ ಸರ್ಕಾರಿ ಆಸ್ಪತ್ರೆಯಲ್ಲಿ 100 ಶಿಶುಗಳು ಅಸುನೀಗಿವೆ. 2019ರಲ್ಲಿ 47,815 ಶಿಶುಗಳಲ್ಲಿ ಜೀವಬಿಟ್ಟಿವೆ. ನಮ್ಮ ದೇಶದಲ್ಲಿ ವರ್ಷಕ್ಕೆ 1.27 ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಪ್ರತಿ 39 ಸೆಕೆಂಡ್‍ಗೆ 5 ವರ್ಷದ ಕೆಳಗಿನ ಮಗು ಬಲಿಯಾಗುತ್ತಿದೆ. ಉತ್ತರ ಪ್ರದೇಶದ ಘೋರಕ್‍ಪುರದ ಸರ್ಕಾರಿ ಆಸ್ಪತ್ರೆಯಲ್ಲೂ ಆಮ್ಲಜನಕದ ಕೊರತೆಯಿಂದ ಅನೇಕ ಮಕ್ಕಳು ಪ್ರಾಣ ತ್ಯಜಿಸಿದ್ದವು. ಇದೇ ರೀತಿ ಇಂದಿಗೂ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ, ವೆಂಟಿಲೇಷನ್ ವಾರ್ಡ್‍ಗಳ ಕೊರತೆಯಿಂದಾಗಿ ಸಾವಿಗೀಡಾಗುವ ಮಕ್ಕಳ ಸಂಖ್ಯೆಗೆ ಕೊರತೆಯೇ ಇಲ್ಲ. ಹೀಗೆಯೇ ನಿಮ್ಹಾನ್ಸ್, ಬೌರಿಂಗ್, ವಿಕ್ಟೋರಿಯಾ ಆಸ್ಪತ್ರೆಗಳ ಸ್ಥಿತಿಯೂ ಇದೆ. ಇಲ್ಲಿ ಗಣ್ಯ ವ್ಯಕ್ತಿಗಳ ಶಿಫಾರಸ್ಸಿನಿಂದ ಬರುವ ರೋಗಿಗಳಿಗೆ ಮೂತ್ರ ತೀವ್ರ ನಿಗಾ ಘಟಕ ಒದಗಿಸಿಕೊಡುವುದೆ ಆಸ್ಪತ್ರೆಯ ಅಧೀಕ್ಷಕರ ಕೆಲಸವಾಗಿರುತ್ತದೆ. ಸಾಮಾನ್ಯರಿಗೆ ಇಲ್ಲಿ ಪ್ರವೇಶ ಸಿಗುವುದು ಸಾಮಾನ್ಯದ ಸಂಗತಿಯಲ್ಲ. ದುರಂತ ಎಂದರೆ ಇವ್ಯಾವು ನಮ್ಮ ಮಾಧ್ಯಮಗಳಿಗೆ ಪ್ರಧಾನ ಸುದ್ದಿಯಾಗುವುದಿಲ್ಲ.
ಲೋಪ ಎಲ್ಲಿ ಅಡಗಿ ಕುಳಿತಿದೆ ಎಂಬುದನ್ನು ಪತ್ತೆಹಚ್ಚುವ ಕೆಲಸ ತುರ್ತಾಗಿ ಆಗಬೇಕಿದೆ. ಇದಕ್ಕಾಗಿ ದೇಶದ ಆರೋಗ್ಯ ವ್ಯವಸ್ಥೆಯನ್ನು ದೆಹಲಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಿದೆ. ವೈದ್ಯಕೀಯ ದೋಷದಿಂದ ಉಂಟಾಗಿರುವ ಸಾವುಗಳ ಕುರಿತು ಸುಪ್ರೀಂ ಕೋರ್ಟ್‍ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಒಳಪಡಿಸಬೇಕು. ತನಿಖೆಯ ನಂತರ ಪರಿಹಾರ ಕೊಡಿಸುವತ್ತ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವ ಅಗತ್ಯತೆಯೂ ಇದೆ.
ಇವತ್ತು ದೇಶದ ಉದ್ದಗಲಕ್ಕೂ ಇರುವ ಗ್ರಾಹಕ ನ್ಯಾಯಾಲಯಗಳಲ್ಲಿಂದು ನೂರಾರು ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳು ದಾಖಲಾಗುತ್ತಿವೆ. ಹೀಗೆ ದಾಖಲಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿ ತಜ್ಞರ ಅಭಿಪ್ರಾಯ ಮತ್ತು ತಜ್ಞರ ಸಾಕ್ಷ್ಯಾಧಾರಗಳು ತಾಂತ್ರಿಕ ತೊಂದರೆಯಿಂದಾಗಿ ಇರುವುದೇ ಇಲ್ಲ. ಇದೊಂದು ವ್ಯಸನದ ಸಂಗತಿ. ವೈದ್ಯಕೀಯ ದುರುಪಯೋಗ ಪ್ರಕರಣಗಳನ್ನು ನಿರ್ಣಯಿಸುವ ವ್ಯವಸ್ಥೆಯನ್ನು `ತಜ್ಞರ ಯುದ್ಧ’ ಎಂದೇ ಕರೆಯುತ್ತೇವೆ. ತಜ್ಞರು ಸದಾ ತಮ್ಮ ವಾದ ಸಮರ್ಥಿಸಿಕೊಳ್ಳಲು ಮುಂಚೂಣಿಯಲ್ಲಿರುತ್ತಾರೆ. ವೈದ್ಯರು ಕೈಗೊಳ್ಳುವ ತುರ್ತು ಕ್ರಮವನ್ನು `ತುರ್ತು ಔಷಧ ಸಾಹಿತ್ಯ’ ಕಾಪಾಡುತ್ತದೆ. ಆದಾಗ್ಯೂ ಆಗಾಗ ಅಭಿಪ್ರಾಯಗಳು ಬೇರೆ, ಬೇರೆಯಾಗಿರುತ್ತದೆ. ಹೀಗಾಗಿ ಎಲ್ಲಾ ಪ್ರಕರಣಗಳಲ್ಲಿ ತಜ್ಞರ ತಂಡದ ಅಭಿಪ್ರಾಯ ಅಗತ್ಯವಾಗಿರುತ್ತದೆ. ಹಾಗೆಯೇ ಪ್ರತಿಯೊಂದು ಪ್ರಕರಣವೂ ಸ್ವಂತ ಅರ್ಹತೆಗಳನ್ನು ಮತ್ತು ಜಟಿಲತೆಗಳನ್ನು ಆಧರಿಸಿ ತೀರ್ಮಾನ ಕೈಗೊಳ್ಳಬೇಕಾಗಿರುತ್ತದೆ. ಇದರಿಂದಾಗಿಯೇ `ವೈದ್ಯಕೀಯ ನಿರ್ಲಕ್ಷ್ಯ’ ಪ್ರಕರಣಗಳನ್ನು ಬಗೆಹರಿಸಲು ಪ್ರತ್ಯೇಕ ನ್ಯಾಯಾಲಯದ ರಚನೆ ಅತ್ಯಂತ ಅಗತ್ಯವಾಗಿರುತ್ತದೆ. `ಪ್ರತ್ಯೇಕ ನ್ಯಾಯಾಲಯ’ ಆದರೆ ಜನಸಾಮಾನ್ಯರಿಗೆ ಎರಡು ಬಗೆಯ ಲಾಭ ಆಗಲಿದೆ. ಒಂದು `ವೈದ್ಯಕೀಯ ನಿರ್ಲಕ್ಷ್ಯ’ಕ್ಕೆ ಗುರಿಯಾದ ಸಂತ್ರಸ್ತನಿಗೆ ದೂರು ಕೊಡಲು `ನಿದಿಷ್ಟ ವೇದಿಕೆ’ ಮತ್ತು `ನಿರ್ದಿಷ್ಟ ಪರಿಹಾರ’ವೂ ಲಭ್ಯವಾಗುತ್ತದೆ. ಅಲ್ಲದೆ ಸಂತ್ರಸ್ತ ಅಲೆದಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದು ತಪ್ಪುತ್ತದೆ. ಮುಖ್ಯವಾಗಿ `ವೈದ್ಯಕೀಯ ನಿರ್ಲಕ್ಷ್ಯ’ ಪ್ರಕರಣಗಳಿಗೆ ಒಳಗಾಗುವ ನತದೃಷ್ಟರು ಹಿಂದುಳಿದವರು ಮತ್ತು ಅವಕಾಶವಂಚಿತರೇ ಆಗಿರುತ್ತಾರೆ. ಅಲ್ಲದೆ, ಸಮಯ ಮಾತ್ರವಲ್ಲದೆ ಹಣ ವ್ಯರ್ಥ ಆಗುವುದನ್ನು ತಪ್ಪಿಸುತ್ತದೆ. ಎರಡನೆಯದಾಗಿ `ಪ್ರತ್ಯೇಕ ನ್ಯಾಯಾಲಯ’ಗಳ ರಚನೆಯಿಂದ ವೈದ್ಯರಿಗೂ ಅನುಕೂಲವಾಗುತ್ತದೆ. ನ್ಯಾಯಾಲಯವು ತಜ್ಞವೈದ್ಯಕೀಯ ವೃತ್ತಿಪರರನ್ನು ಒಳಗೊಂಡಿರಬೇಕು. ಇವರುಗಳು ಸಂಪೂರ್ಣವಾಗಿ ವೈದ್ಯಕೀಯ ವೃತ್ತಿಯ ತಾಂತ್ರಿಕ ತೊಡಕುಗಳನ್ನು ಪ್ರಕರಣದ ಜಟಿಲತೆಯ ಬಗ್ಗೆಯೂ ಅರಿವನ್ನು ಹೊಂದಿರಬೇಕು. ತಜ್ಞರ ತಂಡದ ಸದಸ್ಯರು `ವೈದ್ಯಕೀಯ ದೋಷ’ದ ಹಕ್ಕುಗಳನ್ನು ನಿರ್ಣಯಿಸುವರು. ಇವರುಗಳು `ಪ್ರಾಮಾಣಿಕವಾಗಿ’, `ನಿಸ್ಪಷ್ಟಪಾತ ಮತ್ತು ವಸ್ತುನಿಷ್ಠ ಮಾನದಂಡ’ದಡಿ ಪ್ರಕರಣವನ್ನು ಕಾಣಬೇಕು. ಆಗ ಆಪಾದಿತರು ತಮ್ಮ ವೃತ್ತಿಭಾಂದವರೆಂಬುದನ್ನು ಮರೆತು ತಮ್ಮ `ತಜ್ಞ’ ಅಭಿಪ್ರಾಯವನ್ನು ನೀಡುವರು.










