ರಾಮನಗರ : ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ರಾಮನಗರದಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತಿಳಿಸಿದ್ದಾರೆ. ರಾಮನಗರದ ಹೊರವಲಯದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಮದುವೆ ಸಿದ್ದತಾ ಕಾರ್ಯಗಳು ಅದ್ದೂರಿಯಾಗಿ ನಡೆಯುತ್ತಿದ್ದು, ಈ ವೇಳೆ ಸಿದ್ದತಾ ಕಾರ್ಯಗಳನ್ನು ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ದೇವೇಗೌಡ ಅವರು, ಹಾಸನಕ್ಕೆ ಪ್ರಜ್ವಲ್ ಹಾಗೂ ರೇವಣ್ಣ ಅವರು ಸೀಮಿತರಾಗಿದ್ದಾರೆ. ರಾಮನಗರ ನನಗೆ ಹಾಗೂ ಕುಮಾರಸ್ವಾಮಿಗೆ ಸೀಮಿತವಾಯಿತು. ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಜೀವನ ದೈವದ ಆಟವಾಗಿದ್ದು, ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ತನ್ನ ರಾಜಕೀಯ ಜೀವನವನ್ನು ಆರಂಭಿಸಬೇಕು ಎಂಬ ಉದ್ದೇಶವಿರಲಿಲ್ಲ. ಆಕಸ್ಮಿಕವಾಗಿ ಮಂಡ್ಯದಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು. ಮುಂದಿನ ದಿನಗಳಲ್ಲಿ ಜನರ ಆಶೀರ್ವಾದವಿದ್ದರೆ ನಿಖಿಲ್ ರಾಮನಗರದಿಂದ ಸ್ಪರ್ಧಿಸಬಹುದು. ನಮಗೆ ರಾಜಕೀಯ ಶಕ್ತಿಯನ್ನು ನೀಡಿರುವುದು ರಾಮನಗರ, ಮಂಡ್ಯ ಹಾಗೂ ತುಮಕೂರು. ರಾಮನಗರದಿಂದ ಜನ ಮುಖ್ಯಮಂತ್ರಿ ಆಗಿ ಪ್ರಧಾನಿ ಆಗಿದ್ದೇನೆ. ಹಾಗೆಯೇ ನಿಖಿಲ್ ರಾಮನಗರದಿಂದಲೇ ಬೆಳೆಯಬೇಕು. ನಾನು ಹಾಸನದಲ್ಲಿ ಹುಟ್ಟಿದ್ದರೂ ನಮ್ಮನ್ನು ರಾಜಕೀಯವಾಗಿ ಬೆಳೆಸಿದ್ದು ಮಾತ್ರ ರಾಮನಗರ ಜಿಲ್ಲೆ. ಇಲ್ಲಿಂದಲೇ ನಿಖಿಲ್ ಕುಮಾರಸ್ವಾಮಿ ರಾಜಕೀಯವಾಗಿ ಬೆಳೆಯಬೇಕು ಎಂಬುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.










