ಮೂಡಿಗೆರೆ : ಪಟ್ಟಣದ ಡಿ.ಎಸ್.ಬಿಳೀಗೌಡ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸರ್ಕಾರದ ವತಿಯಿಂದ ಉಚಿತವಾಗಿ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಯಿತು.
ಲ್ಯಾಪ್‍ಟಾಪ್‍ಗಳನ್ನು ವಿತರಿಸಿ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಸಂದರ್ಭದಲ್ಲಿ ಸಮಯವನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ಸಮಯವನ್ನು ಅನಾವಶ್ಯಕವಾಗಿ ಹಾಳುಮಾಡಿಕೊಳ್ಳದೆ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಕಡೆ ನಿರಂತರ ಗಮನವನ್ನು ಹರಿಸಬೇಕು. ಶೈಕ್ಷಣಿಕ ಬದುಕಿನಲ್ಲಿ ಸಮಯ ಎನ್ನುವುದು ಬಹಳ ಪ್ರಾಮುಖ್ಯತೆ ವಹಿಸುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ತಮ್ಮ ಜೀವನದ ಬಗ್ಗೆ ನಿಖರವಾದ ಗುರಿ ಇರಿಸಿಕೊಂಡು ವ್ಯಾಸಂಗ ಮಾಡಬೇಕು. ತಮ್ಮ ಬಿಡುವಿನ ಸಮಯದಲ್ಲಿ ಅನುಪಯುಕ್ತವಾದ ವಿಚಾರಗಳ ಬಗ್ಗೆ ತೆಲೆಕೆಡಿಸಿಕೊಳ್ಳದೆ, ತಮ್ಮ ವೃತ್ತಿಪರ ಭವಿಷ್ಯವನ್ನು ರೂಪಿಸುವ ರಚನಾತ್ಮಕ ತರಬೇತಿಗಳ ಕಡೆ ಗಮನಹರಿಸಿದರೆ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯ.
ಇಂದಿನ ಆಧುನಿಕ ತಂತ್ರಜಾÐನದ ದೆಸೆಯಿಂದಾಗಿ ಪ್ರತೀಯೊಬ್ಬರ ಕೈಯಲ್ಲಿ ಮೊಬೈಲ್ ಹರಿದಾಡುತ್ತಿದೆ. ಇದು ಪರಸ್ಪರ ಸಂಪರ್ಕ ಹೊಂದಲು ಅನಿವಾರ್ಯ ನಿಜ. ಆದರೆ ಇದರಲ್ಲಿಯೇ ಮುಳುಗಿ ತಮ್ಮ ಅಮೂಲ್ಯವಾದ ಸಮಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಕಡಿಮೆ ವೆಚ್ಚದಲ್ಲಿ ಇಂಟರ್‍ನೆಟ್ ಸೌಲಭ್ಯ ದೊರೆತ ಮೇಲೆ ಮೊಬೈಲ್ ಇಂದು ತನ್ನ ಪ್ರಾಭಲ್ಯವನ್ನು ಹೆಚ್ಚು ಮಾಡಿಕೊಂಡಿದೆ. ಅಂತರ್‍ಜಾಲದಲ್ಲಿ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳೆರಡೂ ಒಟ್ಟಾಗಿ ಇರುತ್ತವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉತ್ತಮ ವಿಚಾರಗಳ ಕಡೆ ಗಮನ ಹರಸಿ, ತಮ್ಮ ಭವಿಷ್ಯಕ್ಕೆ ಪೂರಕವಾಗಿ ಬಳಸಿಕೊಂಡರೆ ಒಳಿತು. ಇದೀಗ ಸರ್ಕಾರವು ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲೆಂದು ಉಚಿತವಾಗಿ ಲ್ಯಾಪ್ ಟಾಪ್ ನೀಡುತ್ತಿದ್ದು ಇದರ ಸರಿಯಾದ ಬಳಕೆ ಮಾಡಿಕೊಂಡು ದೇಶಕ್ಕೆ ಉತ್ತಮ ನಾಗರೀಕರಾಗಿ ಬಾಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ಮಾತನಾಡಿ, ಸರ್ಕಾರ ಉಚಿತ ಲ್ಯಾಪ್‍ಟಾಪ್ ನೀಡಿ ವಿದ್ಯಾರ್ಥಿಗಳ ಓದಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಆದರೆ ಎಷ್ಟು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ವಿದ್ಯಾರ್ಥಿಗಳು ಈ ದೇಶದ ಆಸ್ತಿಯಾಗಿ ರೂಪುಗೊಳ್ಳಬೇಕು ಎನ್ನುವುದು ಎಲ್ಲರ ಒತ್ತಾಸೆಯಾಗಿದೆ. ಸರ್ಕಾರಿ ಕಾಲೇಜು ಎಂಬ ತಾತ್ಸಾರ ಬಿಟ್ಟು ಇರುವ ಸವಲತ್ತುಗಳನ್ನು ಬಳಸಿಕೊಂಡು ಜಾÐನಾರ್ಜನೆ ಮಾಡಿಕೊಳ್ಳಬೇಕು. ಹಿಂದಿನ ಕಾಲಕ್ಕೆ ಹೋಲಿಸಿಕೊಂಡರೆ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳ ಜೊತೆಗೆ ವಿದ್ಯಾರ್ಜನೆಗೆ ಪೂರಕವಾದ ಸನ್ನಿವೇಶ ನಿರ್ಮಾಣವಾಗಿದೆ. ಆದರೂ ಇಲ್ಲದಿರುವ ಸೌಲಭ್ಯಗಳ ಕಡೆ ಬೆಟ್ಟು ಮಾಡುವುದನ್ನು ಬಿಟ್ಟು ಓದಿನ ಕಡೆ ಗಮನಹರಸಿ ಪೋಷಕರ ಹಾಗೂ ಕಾಲೇಜಿನ ಹೆಸರು ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಬಸವರಾಜಪ್ಪ ಅವರು ಮಾತನಾಡಿ, ಕಾಲೇಜಿನಲ್ಲಿ ನುರಿತ ಉಪನ್ಯಾಸಕರುಗಳಿದ್ದು ಉತ್ತಮ ಗುಣಮಟ್ಟದ ಪಾಠದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಏಳಿಗೆಗಾಗಿ ಪ್ರಗತಿಪರ ಯೋಜನೆಗಳನ್ನು ಹಮ್ಮಿಕೊಳ್ಳುವುದುರ ಮೂಲಕ ಕಾರ್ಯೋನ್ಮುಖರಾಗಿದ್ದೇವೆ. ವಿದ್ಯಾರ್ಥಿಗಳ ಜೊತೆಗೆ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸುತ್ತಿರುವುದು ಒಳ್ಳೆಯದು. ಕಾಲೇಜು ಹಂತದಲ್ಲಿ ಮಕ್ಕಳಿಗೆ ತುಂಟಾಟ ಸಹಜ, ಇದರ ಜೊತೆಗೆ ಸಮಾಜದಲ್ಲಿನ ಬೇಡದ ವಿಚಾರಗಳ ಕಡೆ ಆಕರ್ಷಣೆಗೆ ಒಳಗಾಗಿ ಅಡ್ಡದಾರಿ ಹಿಡಿಯುವ ಸಾಧ್ಯತೆ ಹೆಚ್ಚು. ಆದುದರಿಂದ ಎಲ್ಲರೂ ಎಚ್ಚರದಿಂದ ಹೆಜ್ಜೆ ಇಡುವುದು ಶ್ರೇಯಸ್ಕರ ಎಂದರು.
ಕಾಲೇಜಿನ ಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿರಣೆ ಮಾಡಲಾಯಿತು. ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಸರೋಜಾ, ಜಗದೀಪ್, ಸುರೇಂದ್ರ, ಜಗದೀಪ್, ಉಪನ್ಯಾಸಕರುಗಳಾದ ಡಾ.ದಯಾನಂದ್, ಡಾ.ಅಪೂರ್ವ ಬಿ ರಾಜು, ರವೀಂದ್ರ ರಾಜನ್ ಇದ್ದರು.










