ನವದೆಹಲಿ : ಭಾರತೀಯ ಸೇನೆಗೂ ಕೊರೊನಾ ವೈರಸ್ ಬಿಸಿ ತಟ್ಟಿದ್ದು, ಜಮ್ಮು-ಕಾಶ್ಮೀರಾದಲ್ಲಿ ಕಾರ್ಯಪ್ರವೃತ್ತರಾಗಿದ್ದ ಯೋಧರೊಬ್ಬರಲ್ಲಿ ಕೊರೊನಾ ವೈರಸ್ ತಗುಲಿರುವುದಾಗಿ ದೃಢಪಟ್ಟಿದೆ. ಜಮ್ಮು-ಕಾಶ್ಮೀರಾದ ಲೇಹ್‍ನ ಚುಹೊಡ್ ಗ್ರಾಮದ 34 ವರ್ಷದ ಯೋಧರಿಗೆ ತನ್ನ ತಂದೆಯಿಂದ ಸೋಂಕು ತಗುಲಿರುವುದಾಗಿ ತಿಳಿದು ಬಂದಿದ್ದು, ಫೆ.20 ರಂದು ಇರಾನ್‍ನಿಂದ ತೀರ್ಥಯಾತ್ರೆ ಮುಗಿಸಿಕೊಂಡು ಬಂದ ಯೋಧರ ತಂದೆಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಲಡಾಕ್‍ನ ಹಾರ್ಟ್ ಫೌಂಡೇಷನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಯೋಧರು ಫೆ. 25ರಂದು ರಜೆಯನ್ನು ಪಡೆದುಕೊಂಡು ತಮ್ಮ ಮನೆಗೆ ಹೋಗಿದ್ದರು, ಬಳಿಕ ರಜೆ ಮುಗಿಸಿಕೊಂಡು ಮಾರ್ಚ್ 2ರಂದು ಕರ್ತವ್ಯಕ್ಕೆ ವಾಪಸ್ಸಾಗಿದ್ದರು. ಈ ವೇಳೆ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಅವರನ್ನು ಮಾರ್ಚ್ 7ರಿಂದ ಪ್ರತ್ಯೇಕ ವಾರ್ಡ್‍ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗಾ ಅವರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೇ ಭಾರತೀಯ ಸೇನೆಯಲ್ಲಿ ಮೊದಲ ಕೊರೊನಾ ಪ್ರಕರಣ ಇದಾಗಿದ್ದು, ಇನ್ನುಳಿದ ಭಾರತೀಯ ಸೇನಾ ಯೋಧರಲ್ಲಿ ಆತಂಕ ಹೆಚ್ಚಾಗಿದೆ. ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 140ಕ್ಕೆ ಏರಿಕೆಯಾಗಿದೆ.










