ಸಣ್ಣದೊಂದು ಕ್ರಿಮಿ ಇಡೀ ಭೂಮಂಡಲವನ್ನೇ ನಡುಗಿಸಿದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಏರಿದರೂ ಪ್ರಕೃತಿಯ ಮುಂದೆ ತಲೆ ಬಾಗಲೇಬೇಕು ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಜಾಗತೀಕರಣದ ಹಲವು ಮಜಲುಗಳಿಗೆ ತಮ್ಮನ್ನು ಒಡ್ಡಿಕೊಂಡು ಅದೇ ಅಭಿವೃದ್ದಿ ಹೊಂದಿದ ಬದುಕು ಎಂದು ಬದುಕುತ್ತಿದ್ದವರಲ್ಲಿ ಹಲವರು ಇಂದು ನಮ್ಮ ಬದುಕು ಹಳ್ಳಿಗಳಲ್ಲೇ ಇದೆ ಎಂದು ಒಪ್ಪಿಕೊಂಡಿದ್ದಾರೆ. ಮತ್ತೂ ಕೆಲವರು ಈ ಅನಿರೀಕ್ಷಿತ ಬೆಳವಣಿಗೆಯ ಬದಲಾದ ಬದುಕಿಗೆ ಒಗ್ಗಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಹೌದು, ಇದೆಲ್ಲವೂ ಇಂದು ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಮಹಾಮಾರಿಯ ಪರಿಣಾಮ.
ಪ್ರಪಂಚದ ಮುಂದುವರೆದ ದೇಶಗಳೂ ಕೂಡಾ ಕೈಚೆಲ್ಲಿ ಕೂರುವ ಮಟ್ಟಿಗೆ ಕೊರೊನಾ ಸೋಂಕು ಆ ದೇಶಗಳನ್ನು ಆವರಿಸಿ ಪ್ರತಿನಿತ್ಯ ಅಲ್ಲಿ ಸಾವಿನ ಡಂಗುರ ಸಾರುತ್ತಿದೆ. ಆದರೆ ಈ ದೇಶಗಳಲ್ಲಿನ ಸೋಂಕಿತರ ಹಾಗೂ ಸಾವಿನ ಅಂಕಿ ಅಂಶಗಳಿಗೆ ಹೋಲಿಸಿದರೆ ಮುಂದುವರೆಯುತ್ತಿರುವ 130 ಕೋಟಿಗೂ ಮೀರಿ ಜನಸಂಖ್ಯೆ ಹೊಂದಿರುವ ನಮ್ಮ ಭಾರತ ದೇಶದಲ್ಲಿನ ಈ ಅಂಕಿಅಂಶಗಳು ನಮ್ಮಲ್ಲಿ ಇನ್ನೂ ಭರವಸೆಯನ್ನು ಉಳಿಸಿದೆ. ಇನ್ನೂ ಕೂಡಾ ಭಾರತದ ಕೆಲವು ರಾಜ್ಯಗಳು ಮತ್ತು ಹಲವಾರು ಜಿಲ್ಲೆಗಳು ಕೋವಿಡ್-19 ಕಬಂಧ ಬಾಹುವಿನಿಂದ ದೂರ ಉಳಿದಿವೆ.
ಹೀಗೆ ಕೊರೊನಾ ಅಟ್ಟಹಾಸಕ್ಕೆ ನಲುಗದೆ ಉಳಿದಿರುವ ಜಿಲ್ಲೆ ಕಾಫಿನಾಡು ನಮ್ಮ ಚಿಕ್ಕಮಗಳೂರು ಜಿಲ್ಲೆ ಈವರೆಗೆ ಶಂಕಿತರನ್ನಷ್ಟೇ ಗುರುತಿಸಿ ಕ್ವಾರಂಟೈನ್‍ನಲ್ಲಿಡಲಾಗಿದ್ದು, ಯಾವುದೇ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿಲ್ಲ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸುರಿದ ರಣಭೀಕರ ಮಳೆಗೆ ತತ್ತರಿಸಿದ್ದ ಮಲೆನಾಡು ಸಾಕಷ್ಟು ಜೀವಹಾನಿ ಹಾಗೂ ಆಸ್ತಿ ನಷ್ಟಕ್ಕೆ ಸಾಕ್ಷಿಯಾಗಿತ್ತು. ಅಂದು ಸುರಿದ ಭಾರಿ ಮಳೆಗೆ ಅಕ್ಷರಶಃ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ರೈತಾಪಿ ವರ್ಗ ನಂಬಿಕೊಂಡಿದ್ದ ಭೂಮಿ ಇಲ್ಲಿನ ಮುಖ್ಯ ಬೆಳೆಗಳಾದ ಕಾಫಿ, ಮೆಣಸು, ಏಲಕ್ಕಿ, ಅಡಿಕೆಯೊಂದಿಗೆ ನೀರಿನಲ್ಲಿ ಕೊಚ್ಚಿಹೋಗಿದ್ದು, ಇಂದಿಗೂ ನಮ್ಮೆಲ್ಲರನ್ನೂ ಕಂಗೆಡುವಂತೆ ಮಾಡುತ್ತದೆ.
ಕೊರೊನಾ ಲಾಕ್‍ಡೌನ್‍ಗೆ ಸ್ವಲ್ಪ ಮುಂಚಿತವಾಗಷ್ಟೇ ಇಲ್ಲಿನ ಕಾಫಿ ಹಾಗೂ ಮೆಣಸು ಕೊಯ್ಲಿನ ಬಹುಪಾಲು ಕೆಲಸಗಳು ಮುಗಿದಿದ್ದವು. ಅಳಿದುಳಿದಿದ್ದ ಬೆಳೆಯನ್ನು ಕೃಷಿಕರು ಜತನದಿಂದ ಕೊಯ್ಲು ಮಾಡಿದ್ದರಷ್ಟೇ ಆಗಲೇ ಬಂದಪ್ಪಳಿಸಿದ್ದು ಈ ಮಹಾಮಾರಿ ಸ್ವಲ್ಪ ಮೊದಲಾಗಿದ್ದರೆ ಖಂಡಿತಾ ಲಾಕ್‍ಡೌನ್‍ನಿಂದ ಕೃಷಿ ಕಾರ್ಮಿಕರ ಕೊರತೆ ಉಂಟಾಗಿ ಕೈಗೆ ಬಂದಿದ್ದ ಅಲ್ಪ ಬೆಳೆಯೂ ಮಣ್ಣಿಗೆ ಸೇರಿಬಿಡುತ್ತಿತ್ತು.
ಆಗ ಅಕ್ಷರಶಹ ಕಾಫಿನಾಡಿಗರ ಬದುಕು ನರಕವಾಗುತ್ತಿದ್ದರಲ್ಲಿ ಎರಡು ಮಾತಿಲ್ಲ. ಕರ್ನಾಟಕ ಹಲವು ರೈತರು ತಮ್ಮ ಮಕ್ಕಳಂತೆ ಕಾಪಾಡಿ ಬೆಳೆಸಿದ ಬೆಳೆಯನ್ನು ಮಣ್ಣಿಗೆ ಸುರಿದು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದು, ಎಲ್ಲರ ಹೃದಯವನ್ನು ಹಿಂಡಿತ್ತು. ಮಲೆನಾಡಿನ ಕೆಲವು ಉಪ ಬೆಳೆಗಳಿಗೆ ಕೂಡಾ ಈ ಪರಿಸ್ಥಿತಿ ಬಂದಿದೆ. ಆದರೂ ಪ್ರಸ್ತುತ ಸಮಸ್ಯೆಯ ಬಹುಪಾಲು ಇಲ್ಲಿನ ಬಾಗಿಲು ತಟ್ಟಿಲ್ಲ ಎನ್ನುವುದೇ ಸಮಾಧಾನಕರ ಸಂಗತಿ.
ಇದೇನೆ ಇದ್ದರು ಇಡೀ ದೇಶವೇ ಕೊರೊನಾ ಸೋಂಕಿನ ಸಮಸ್ಯೆಯಿಂದ ನಲುಗುತ್ತಿರುವಾಗ ನಾವು ನಮ್ಮಲ್ಲಿನ ಪ್ರಸ್ತುತ ಸ್ಥಿತಿಗತಿಗಳನ್ನು ಏರು ಪೇರಿಲ್ಲದೆ ಕಾಪಾಡಬೇಕಾದ ಅನಿವಾರ್ಯತೆ ಇದೆ. ಇದು ನಮ್ಮೆಲ್ಲರ ಜವಾಬ್ದಾರಿಯುತ ನಡವಳಿಕೆಯಿಂದ ಮಾತ್ರ ಸಾಧ್ಯ. ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ನಮ್ಮ ನಿಮ್ಮೆಲ್ಲ ಸಹಕಾರ ಅತ್ಯಗತ್ಯ. ಹಾಗೇ ಈ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರದ ಎಲ್ಲಾ ಯೋಜನೆಗಳ ಸದುಪಯೋಗ ಪಡೆದುಕೊಂಡು ಮತ್ತೊಮ್ಮೆ ನಾವು ನಮ್ಮ ಸಮಯ ಪ್ರಜ್ಞೆಯನ್ನು ಬಿಂಬಿಸಬೇಕಾಗಿದೆ.










