ಚಿಕ್ಕಮಗಳೂರು : ಭಜರಂಗ ದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮಹೇಂದ್ರ ಕುಮಾರ್ ವಿಧಿವಶರಾಗಿದ್ದಾರೆ. ಚಿಕ್ಕಮಗಳೂರಿನ ಕೊಪ್ಪ ಮೂಲದ ಮಹೇಂದ್ರ ಕುಮಾರ್ ಅವರು ಸದ್ಯ ಬೆಂಗಳೂರಿನಲ್ಲೇ ನೆಲೆಸಿದ್ದರು. ಭಜರಂಗ ದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್, 2008 ರಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿದ ಸಂಬಂಧ ಬಂಧನಕ್ಕೊಳಗಾಗಿದ್ದರು. ಬಳಿಕ ಅದೇ ಪ್ರಕರಣದಲ್ಲಿ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. 2008 ರ ಅಕ್ಟೋಬರ್ 1 ರಂದು ಭಜರಂಗ ದಳಕ್ಕೆ ರಾಜೀನಾಮೆ ನೀಡಿದ ಮಹೇಂದ್ರ ಕುಮಾರ್ ಅವರು, 2011 ಫೆಬ್ರವರಿ 21 ರಂದು ಜೆಡಿಎಸ್ ಸೇರಿದ್ದರು. ಸಂಘ ಪರಿವಾರ ಕಟು ಟೀಕಾಕಾರರಾಗಿ ಸಾಮಾಜಿಕ, ಜಾಗೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮಹೇಂದ್ರ ಕುಮಾರ್ ಅವರು ಭಾಗವಹಿಸುತ್ತಿದ್ದರು. ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ










