ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ದೇಶಾದ್ಯಂತ ಕಳೆದ ಒಂದು ತಿಂಗಳಿನಿಂದ ಲಾಕ್‍ಡೌನ್ ಆಗಿದ್ದು, ಈ ಹಿನ್ನೆಲೆ ಮಧ್ಯ ಸಿಗದೆ ಕಂಗಾಲಾಗಿದ್ದ ಮದ್ಯ ಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಮೇ 3ರಂದು 2ನೇ ಹಂತದ ಲಾಕ್‍ಡೌನ್ ಮುಕ್ತಾಯಗೊಳ್ಳಲಿದ್ದು, ಹೀಗಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗ ಸೂಚಿಯಲ್ಲಿ ಷರತ್ತುಬದ್ಧ ಮದ್ಯ ಮಾರಾಟ ಮಾಡಲು ಅನುಮತಿ ನೀಡಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಮದ್ಯ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯವನ್ನು ಮೂರು ವಲಯಗಳನ್ನಾಗಿ ವಿಂಗಡನೆ ಮಾಡಿದ್ದು, ಎಲ್ಲಾ ವಲಯಗಳಲ್ಲಿಯೂ ಮೇ. 4ರಿಂದ ಮದ್ಯ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಸೋಮವಾರದಿಂದ ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆ ವರೆಗೂ ಮಾತ್ರ ಮದ್ಯದ ಅಂಗಡಿ ತೆರಯಲು ಅವಕಾಶ ನೀಡಿದ್ದು, ಕನಿಷ್ಠ 6 ಅಡಿ ಅಂತರ ಕಾಯ್ದುಕೊಂಡು ಮದ್ಯ ಖರೀದಿಸಬೇಕು. ಮದ್ಯವನ್ನು ಪಾರ್ಸಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿದ್ದು, ಯಾರೂ ಕೂಡಾ ಮದ್ಯದ ಅಂಗಡಿ ಒಳಗೆ ಸೇವಿಸುವಂತಿಲ್ಲ. ಹಾಗೂ ಮದ್ಯ ಖರೀದಿಸುವಾಗ ಒಂದು ಬಾರಿಗೆ 5 ಜನರು ಮಾತ್ರ ಅಂಗಡಿ ಒಳಗೆ ಇರಬೇಕು. ಬಾರ್, ರೆಸ್ಟೋರೆಂಟ್‍ಗಳು ತೆರೆಯುವಂತಿಲ್ಲ. ಕೇವಲ ಮದ್ಯದ ಅಂಗಡಿ ಮಾತ್ರ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಮದ್ಯ ಮಾತ್ರವಲ್ಲದೇ ಪಾನ್, ಗುಟ್ಕಾ ಮಾರಾಟಕ್ಕೂ ಅನುಮತಿ ನೀಡಲಾಗಿದೆ.










