ರಾಜ್ಯದಲ್ಲಿ ಇಂದು ಒಂದೇ ದಿನ 63 ಮಂದಿಗೆ ಕೊರೊನಾ ಸೋಂಕು ದೃಢ-ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆ…

144
firstsuddi

ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ಭಾರಿ ಪ್ರಮಾಣದಲ್ಲಿ ಮುಂದುವರೆದಿದ್ದು, ಇಂದು ಒಂದೇ ದಿನ 63 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ಇಂದು ಬೆಳಗ್ಗಿನ ಹೆಲ್ತ್ ಬುಲೆಟಿನ್‍ನಲ್ಲಿ 42 ಮಂದಿ ಸೋಂಕಿತರು ಪತ್ತೆಯಾಗಿದ್ದು, ಈಗಿನ ಹೆಲ್ತ್ ಬುಲೆಟಿನ್‍ನಲ್ಲಿ 21 ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದ್ದು, ರಾಜ್ಯದಲ್ಲಿ ಇಷ್ಟುದಿನದಲ್ಲಿ ಇಂದೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಬಾಗಲಕೋಟೆ-15, ದಾವಣಗೆರೆ-12, ಗದಗ-3, ಬೆಂಗಳೂರು-4, ಧಾರವಾಡ-9, ಕೋಲಾರ-5, ಹಾಸನ-5, ಬೀದರ್-2, ದಕ್ಷಿಣ ಕನ್ನಡ-2, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.