ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ದೇಶದಲ್ಲಿ ಕುಸಿದಿರುವ ಆರ್ಥಿಕತೆಗೆ ಪುನಃಶ್ಚೇತನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2ನೇ ಹಂತದಲ್ಲಿ ವಿವರಣೆ ನೀಡುತ್ತಿದ್ದು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಸಣ್ಣ ರೈತರಿಗೆ 3 ಯೋಜನೆಗಳನ್ನು ಪ್ರಕಟಿಸಿದ್ದಾರೆ.
ದೇಶದಲ್ಲಿ ಯಾವುದೇ ಕಾರಣಕ್ಕೂ ರೈತರನ್ನು ಕಡೆಗಣಿಸಲು ಸಾಧ್ಯವಿಲ್ಲ. ಈಗಾಗಲೇ 3 ಲಕ್ಷ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 4 ಲಕ್ಷ ಕೋಟಿ ರೂ ಸಾಲವನ್ನು ನೀಡಲಾಗಿದೆ. ಕಳೆದ 2 ತಿಂಗಳಲ್ಲಿ 25 ಸಾವಿರ ಕೋಟಿ ಕೋಟಿ ಸಾಲವನ್ನು ವಿತರಿಸಲಾಗಿದೆ. ರೈತರಿಗೆ ಸಾಲದ ಇಎಂಐಗಳನ್ನು ಪಾವತಿಸಲು 3 ತಿಂಗಳು ವಿನಾಯಿತಿ ನೀಡಲಾಗಿದೆ. 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದರು.
ಹಾಗೆಯೇ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನೂ ಕೂಡಾ ಮರೆತಿಲ್ಲ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಬಡವರ ನೆರವಿಗೆ ಬಂದಿದ್ದು, ವಲಸಿಗರಿಗೆ 11 ಸಾವಿರ ಕೋಟಿ ಬಳಸಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಲಾಗಿದೆ. ರಾಜ್ಯ ಸರ್ಕಾರಗಳ ಎಸ್ಡಿಆರ್ಎಫ್ ನಿಧಿಯ ಮೂಲಕ ವಲಸೆ ಕಾರ್ಮಿಕರ ನಿರಾಶ್ರಿತರ ಕೇಂದ್ರಕ್ಕೆ ಹಣ ವರ್ಗಾವಣೆ ಮಾಡಲು ಅನುಮತಿ ನೀಡಲಾಗಿದೆ. ಅಲ್ಲದೇ ನಗರ ಪ್ರದೇಶಗಳಲ್ಲಿ ಮನೆಯಿಲ್ಲದ ಬಡವರಿಗೂ ಮೂರು ಹೊತ್ತಿನ ಊಟದ ವ್ಯವಸ್ಥೆ ಮಾಡಲಾಗಿದೆ. 6,700 ಕೋಟಿ ರೂ ಕೆಲಸದ ಬಂಡವಾಳವನ್ನು ಮಾಡಲಾಗಿದ್ದು, ಕಳೆದ 2 ತಿಂಗಳಲ್ಲಿ 7,200 ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡಲಾಗಿದೆ ಎಂದರು.










