ಮೂಡಿಗೆರೆ : ದಂಧೆಕೋರರಿಗೆ ಬದಲಿ ಮಾರ್ಗ ಸೂಚಿಸಿ ಅಕ್ರಮ ಚಟುವಟಿಕೆಗಳಿಗೆ ಬೆಂಬಲ-ಪೋಲಿಸರ ವಿರುದ್ಧ ರೈತ ಸಂಘದ ಆರೋಪ…

245
firstsuddi

ಮೂಡಿಗೆರೆ : ಚೆಕ್ ಪೋಸ್ಟ್ ಗಳಲ್ಲಿ ಅಕ್ರಮ ದಂಧೆಕೋರರಿಗೆ ಬದಲಿ ಮಾರ್ಗ ಸೂಚಿಸಿ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡಿರುವ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಕೈಗೊಂಡು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಮೂಡಿಗೆರೆ ರೈತಸಂಘಟನೆ ಎಚ್ಚರಿಕೆ ನೀಡಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮೂಡಿಗೆರೆ ರೈತ ಸಂಘದ ಅಧ್ಯಕ್ಷ ಪಿ.ಕೆ.ನಾಗೇಶ್ ಅವರು ಮಾತನಾಡಿ, ಲಾಕ್‍ಡೌನ್ ಅವಧಿಯಲ್ಲಿ ಬಣಕಲ್ ಹಾಗೂ ಗೋಣಿಬೀಡು ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ತೆರೆದಿದ್ದ ಚೆಕ್ ಪೋಸ್ಟ್‍ಗಳಲ್ಲಿ ದಂಧೆಕೋರರಿಗೆ ಬದಲಿ ಮಾರ್ಗಗಳಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಪೋಲಿಸರು ದಂಧೆಕೋರರ ಪರವಾಗಿ ಕೆಲಸ ಮಾಡಿದ್ದಾರೆ. ಈ ವಿಚಾರವಾಗಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಲಾಕ್‍ಡೌನ್ ಅವಧಿಯಲ್ಲಿ ಸರಕು ವಾಹನ ಸಹಿತ ಯಾವುದೇ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಪೋಲಿಸರು ಮುಂದೆ ನಿಂತು ಸರಕು ವಾಹನಗಳು ಸಂಚಾರ ಮಾಡಲು ಕಳ್ಳ ಮಾರ್ಗದ ಮೂಲಕ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟಗಾರರನ್ನು ಮದ್ಯ ಸಹಿತ ಕಾರು ಹಾಗೂ ಬೈಕುಗಳನ್ನು ವಶಪಡಿಸಿಕೊಂಡಿದ್ದು ರಾತ್ರೋ ರಾತ್ರಿ ಕಾರಿನ ಸಮೇತ ಆರೋಪಿಗಳನ್ನು ಬಿಟ್ಟಿದ್ದು ಕೇವಲ ಬೈಕುಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುಮತಿ ನೀಡಿದ್ದರೂ ಸಹ ಅಂಥಹ ವಾಹನಗಳನ್ನು ಅಡ್ಡಗಟ್ಟಿ ಕಿರುಕುಳ ನೀಡಿ ವಸೂಲಿ ದಂಧೆಗೆ ನಿಂತಿದ್ದಾರೆ. ಪೋಲಿಸರು ಸಾರ್ವಜನಿಕರಿಂದ ಹಣ ವಸೂಲಿ ಮಾಡಿರುವುದನ್ನು ಪೋಲಿಸ್ ಠಾಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇರಿಸಿರುವ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ವೀಕ್ಷಿಸಬಹುದು. ಹಿರಿಯ ಅಧಿಕಾರಿಗಳು ಉನ್ನತಮಟ್ಟದ ತನಿಖಾ ತಂಡವನ್ನು ರಚಿಸಿ ಅಕ್ರಮ ಎಸಗಿರುವ ಪೋಲಿಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಡಿ.ಅಣ್ಣಪ್ಪ ಗೌಡ, ರೈತ ಮುಖಂಡ ಹೆಚ್.ಇ ಸುರೇಂದ್ರ, ಕಾರ್ಮಿಕ ಮುಖಂಡ ರಾಮಚಂದ್ರ ಇದ್ದರು.