ಮೂಡಿಗೆರೆ : ಚಾಲಕರು ಸಾಮಾಜಿಕ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ವೃತ್ತಿ ನಿರ್ವಹಣೆ ಮಾಡಬೇಕು : ಡಾ.ಪ್ರೇಮ್ ಕುಮಾರ್.

221
firstsuddi

ಮೂಡಿಗೆರೆ : ಚಾಲಕರು ಸಾಮಾಜಿಕ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ವೃತ್ತಿ ನಿರ್ವಹಣೆ ಮಾಡಿದಲ್ಲಿ ಕುಟುಂಬದ ಹಾಗೂ ಸಮಾಜದ ಹಿತವನ್ನು ಕಾಪಾಡಬಹುದು ಎಂದು ಕಳಸ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಪ್ರೇಮ್ ಕುಮಾರ್ ಅಭಿಪ್ರಾಯಪಟ್ಟರು.
ಕೊರೋನಾ ಮುಕ್ತ ಕಳಸ ವಾಟ್ಸ್‍ಪ್ ಗ್ರೂಪ್ ವತಿಯಿಂದ ಆಶಿರ್ವಾದ್ ಕಂಫಟ್ರ್ಸ್‍ನಲ್ಲಿ ಆಯೋಜಿಸಲಾಗಿದ್ದ ಪ್ರಯಾಣಿಕ ಹಾಗೂ ಸರಕು ವಾಹನಗಳ ಚಾಲಕರು ಹಾಗೂ ಮಾಲಿಕರಿಗೆ ಆರೋಗ್ಯ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಚಾಲಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕಣ್ಣಿಗೆ ಕನ್ನಡಕ ಧರಿಸಬೇಕು. ತಮ್ಮ ವಾಹನಗಳಿಗೆ ಹತ್ತುವಾಗ ಮತ್ತು ಇಳಿಯುವಾಗ ಕಡ್ಡಾಯವಾಗಿ ಸ್ಯಾನಿಟೈಸರ್ ಧರಿಸಬೇಕು. ಸಾಧ್ಯವಾದಲ್ಲಿ ಪ್ರತೀನಿತ್ಯ ವಾಹನಗಳನ್ನು ಔಷಧ ಮಿಶ್ರಿತ ನೀರಿನಿಂದ ತೊಳೆಯಬೇಕು. ಕೊರೋನಾ ಸೋಂಕು ಮಾತ್ರವಲ್ಲ ಯಾವುದೇ ವೈರಸ್ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಇದು ಅತ್ಯವಶ್ಯ. ತಮ್ಮ ಹಿರಿಯರುಗಳು ಶುದ್ಧತೆಯ ಬಗ್ಗೆ ಬಹಳ ಜಾಗೃತೆ ವಹಿಸುತ್ತಿದ್ದರು. ಆದರೆ ಅಲ್ಪಸ್ವಲ್ಪ ಓದಿಕೊಂಡ ನಾವುಗಳು ಅವುಗಳನ್ನು ಮೂಢನಂಬಿಕೆ ಎಂದು ಅಲ್ಲಗಳೆಯುತ್ತಿದ್ದೇವೆ. ಒಳ್ಳೆಯ ಕಾರ್ಯಗಳು ಎಲ್ಲಿಯೇ ಇರಲಿ, ಯಾರದ್ದೇ ಆಗಲಿ ಅವುಗಳನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು ಆರೋಗ್ಯವಂತ ಜೀವನ ನಡೆಸಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಕುದುರೆಮುಖ ಠಾಣಾಧಿಕಾರಿ ನಂಜಪ್ಪ ಅವರು ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಮೇಲೆ ಹೆಚ್ಚಿನ ಒತ್ತಡ ಇದೆ. ಬಹುತೇಕ ಸಾರ್ವಜನಿಕರು ನಮ್ಮ ಮನವಿಗಳಿಗೆ ಸ್ಪಂದನೆ ನೀಡಿ ಸಹಕರಿಸುತ್ತಿದ್ದಾರೆ. ಆದರೆ ಕೆಲವು ಅನ್ಯಮನಸ್ಕರು ಉದ್ದೇಶ ಪೂರ್ವಕವಾಗಿ ನಮ್ಮ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಅಂಥಹವರನ್ನು ಎಡೆಮುರಿಕಟ್ಟಿ ಮೂಲೆಯಲ್ಲಿ ಕುಳ್ಳಿರಿಸಿದ್ದೇವೆ. ಎಲ್ಲೋ ಕೆಲವರು ಮಾಡುವ ಇಂಥಹ ಅನಿಷ್ಟ ಚಟುವಟಿಕೆಗಳಿಂದಾಗಿ ಎಲ್ಲರನ್ನೂ ಅದೇ ದೃಷ್ಟಿಯಲ್ಲಿ ನೋಡುವಂತಾಗಿದೆ. ಸಾರ್ವಜನಿಕರೇ ಇಂಥಹವರನ್ನು ಕಟ್ಟಿ ಹಾಕಿದಲ್ಲಿ ನಮಗೆ ಇನ್ನಷ್ಟು ಉತ್ತಮ ಕಾರ್ಯ ಮಾಡಲು ಅನುಕೂಲವಾಗುತ್ತದೆ ಎಂದರು.
ಕಾರ್ಯಾಗಾರಕ್ಕೆ ಬಂದಿದ್ದ ಸುಮಾರು 60 ಮಂದಿ ಚಾಲಕರುಗಳಿಗೆ ಹಾಗೂ ವಾಹನಗಳ ಮಾಲಿಕರುಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್‍ಗಳನ್ನು ವಿತರಿಸಲಾಯಿತು. ಕಳಸ ವಾಟ್ಸ್‍ಪ್ ಗ್ರೂಪ್ ಅಡ್ಮಿನ್ ರವಿ ಕೆಳಂಗಡಿ, ಕುದುರೆಮುಖ ವೃತ್ತ ನಿರೀಕ್ಷಕ ವಿಜಯ್ ಕುಮಾರ್, ಉದ್ಯಮಿ ರವಿ ರೈ, ವೈದ್ಯ ಡಾ.ವಿಕ್ರಮ್ ಪ್ರಭು, ಕಳಸ ಠಾಣಾ ಹೆಡ್ ಕಾನಿಸ್ಟೇಬಲ್ ರಾಜಣ್ಣ ಸೇರಿಂದಂತೆ ಹಲವರು ಪಾಲ್ಗೊಂಡಿದ್ದರು.